ಬೀದರ್: ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ಪುನಶ್ಚೇತನಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶಟಕಾರ್ ಒತ್ತಾಯಿಸಿದ್ದಾರೆ.
ಸಕ್ಕರೆ ಸಚಿವರಿಗೆ ಪತ್ರ ಬರೆದ ಅವರು, ಮೈಸೂರು ಶುಗರ್, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಸಚಿವ ಸಂಪುಟ ಸಮ್ಮತಿಸಿದೆ. ಇದೇ ಮಾದರಿಯಲ್ಲಿ ಬೀದರ್ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ ಎನಿಸಿರುವ ಬಿಎಸ್ಸೆಸ್ಕೆ ಪುನರಾರಂಭಕ್ಕೆ ಮುಂದಾಗಬೇಕು ಎಂದು ಗಮನ ಸೆಳೆದಿದ್ದಾರೆ.
ನಾನಾ ಕಾರಣಗಳಿಂದ ಬಿಎಸ್ಸೆಸ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮೂರು ವರ್ಷಗಳಿಂದ ಬಂದ್ ಆಗಿದೆ. ಇದರಿಂದ ಜಿಲ್ಲೆಯ ಸಹಸ್ರಾರು ಕಬ್ಬು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಕಾರ್ಖಾನೆಗೆ ಪುನಶ್ಚೇತನ ನೀಡಿ ಮತ್ತೆ ಆರಂಭಿಸುವ ಬಗ್ಗೆ ರೈತ ಸಂಘಟನೆಗಳು, ಸಂಘ, ಸಂಸ್ಥೆಗಳು ನಿರಂತರ ಒತ್ತಾಯಿಸುತ್ತಿವೆ. ಬೆಂಗಳೂರಿಗೆ ಹಲವು ಸಲ ನಿಯೋಗ ಕೊಂಡೊಯ್ದು ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಕಾರ್ಖಾನೆಯು ಕಬ್ಬು ನುರಿಸುವಿಕೆ ನಿಲ್ಲಿಸಿದ ಕಾರಣ ಸದ್ಯ ನಿರುಪಯುಕ್ತ ಎನಿಸಿದೆ. ನೂರಾರು ಕೋಟಿ ರೂ. ವ್ಯಯಿಸಿರುವಂಥ ಕಾರ್ಖಾನೆ ಹೀಗೆಯೇ ಬಿಟ್ಟರೆ ಪೂರ್ಣ ಹಾಳಾಗುತ್ತದೆ. ಯಂತ್ರೋಪಕರಣ ಸೇರಿ ಎಲ್ಲ್ಲ ಸಾಮಗ್ರಿಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಈ ಸ್ಥಿತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ರೈತರಿಗೆ ಯಾವುದೇ ನೀರಾವರಿ ಯೋಜನೆಗಳಿಲ್ಲ. ಇದ್ದ ಯೋಜನೆಗಳು ನಾಗರಿಕರಿಗೆ ಕುಡಿಯಲು ನೀರು ಕಲ್ಪಿಸಲು ಮಾತ್ರ ಪ್ರಾಮುಖ್ಯತೆ ನೀಡಿವೆ. ಇದರಿಂದ ಹೊಲ, ಗದ್ದೆಗಳಿಗೆ ನೀರು ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿವರ್ಷ 40-50 ಲಕ್ಷ ಟನ್ ಕಬ್ಬು ಬೆಳೆಯಬಹುದಾಗಿದೆ. ಆದರೆ ಕಬ್ಬು ಸಾಗಣೆ ಸಮಸ್ಯೆಯಿಂದ ಅನೇಕ ರೈತರು ದೂರ ಉಳಿಯುತ್ತಿದ್ದಾರೆ. ರಾಜಕೀಯ ನಾಯಕರ ಇಚ್ಛಾಶಕ್ತಿ ಹಾಗೂ ಸಮರ್ಥ ನಾಯಕತ್ವ ಕೊರತೆ ಈ ಸಮಸ್ಯೆಗೆ ಮೂಲ ಕಾರಣ. ತಾವು ಗಮನಹರಿಸಿ ಸಕಾರಾತ್ಮಕ ಹೆಜ್ಜೆ ಇಡಬೇಕೆಂದು ಕೋರಿದ್ದಾರೆ.