ಜಿಲ್ಲೆ

ಬಿಎಸ್‌ವೈ ನೇತೃತ್ವದಲ್ಲಿ 22ರಂದು ಚಿತ್ರದುರ್ಗದಲ್ಲಿ ಬಿಜೆಪಿ ಸಭೆ

ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಬಳಿಕ ಪಕ್ಷದ ಸಂಘಟನೆಗೆ ಬಿಜೆಪಿ ನಾಯಕರು ರಾಜ್ಯದಲ್ಲಿ ಪ್ರವಾಸ ನಡೆಸಿ ಕಾರ‌್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇದಕ್ಕಾಗಿ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ 4 ತಂಡ ರಚಿಸಲಾಗಿದೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಒಂದು ತಂಡ 22ರಂದು ದಾವಣಗೆರೆ,ಚಿತ್ರದುರ್ಗ,ತುಮಕೂರು ಹಾಗೂ ಮಧುಗಿರಿಗಳಲ್ಲಿ ಸಭೆ ನಡೆಸಲಿದೆ. ಅಂದು ಬೆಳಗ್ಗೆ 10.30ಕ್ಕೆ ದಾವಣಗೆರೆ, ಮಧ್ಯಾಹ್ನ 2.30ಕ್ಕೆ ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ,ಸಂಸದರಾದ ತೇಜಸ್ವಿಸೂರ್ಯ,ಪಿ.ಸಿ.ಮೋಹನ್ ಸೇರಿದಂತೆ ಪಕ್ಷದ ಸಂಸದರು,ಶಾಸಕರು,ವಿಧಾನಪರಿಷತ್ ಸದಸ್ಯರು,ಮಾಜಿ ಶಾಸಕರು,ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಸರ್ಕಾರಿ ಮೆಡಿಕಲ್ ಕಾಲೇಜು
ಇದೇ ಶೈಕ್ಷಣಿಕ ವರ್ಷದಿಂದ ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಅನುಮತಿ ನೀಡಿದೆ. ಕರ್ನಾಟಕದವರೇ ಆದ ಎನ್‌ಎಂಸಿ ನಿರ್ದೇಶಕ ಗಂಗಾಧರಯ್ಯ, ವಿಶೇಷಾಧಿಕಾರಿ ಡಾ.ಯುವರಾಜ್ ಅವರು ಅನುಮತಿಗಾಗಿ ಶ್ರಮಿಸಿದ್ದಾರೆ. ಜಿಆರ್‌ಹಳ್ಳಿ ಸ್ನಾತಕೋತ್ತರ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತರಗತಿ ನಡೆಸಲಾಗುವುದು. ಇದಕ್ಕಾಗಿ ಸಂಬಂಧಿಸಿದವರ ಜತೆ ಚರ್ಚಿಸಲಾಗಿದೆ. ಹೆಚ್ಚುವರಿ ಕೊಠಡಿಗಳನ್ನೂ ಅಲ್ಲಿ ನಿರ್ಮಿಸಲಾಗುವುದು ಎಂದರು.
ಇಂಗಳದಾಳ್ ಬಳಿ 80 ಎಕರೆ, ಜಾಲಿಕಟ್ಟೆ ಗ್ರಾಮದಲ್ಲಿ 40 ಎಕರೆ ಹಾಗೂ ಚಿಕ್ಕಾಪುರದಲ್ಲ್ಲಿ 30 ಎಕರೆ ಜಮೀನಿದೆ. ಎಲ್ಲರೊಂದಿಗೆ ಚರ್ಚಿಸಿ ಮೆಡಿಕಲ್ ಕಾಲೇಜು ಕಟ್ಟಡವನ್ನು ಎಲ್ಲಿ ನಿರ್ಮಿಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು. ಈ ವಿಚಾರದಲ್ಲಿ ನನಗೆ ಯಾವುದೇ ಇಗೋ ಇಲ್ಲ ಎಂದರು.

ಜನರನ್ನು ದಿಕ್ಕು ತಪ್ಪಿಸಬೇಡಿ
ಗ್ಯಾರಂಟಿಗಳ ಅನುಷ್ಠಾನ ವಿಚಾರದಲ್ಲಿ ದ್ವೇಷದ ಮಾತುಗಳನ್ನಾಡುತ್ತಾ ಜನರನ್ನು ದಿಕ್ಕು ತಪ್ಪಿಸಬೇಡಿ ಎಂದು ಕಾಂಗ್ರೆಸ್ಸನ್ನು ಎಚ್ಚರಿಸಿದ ಸಚಿವರು,ನೀವು ಸ್ವಾತಂತ್ರೃಹೋರಾಟಗಾರರೆಂದು ಜನರು ನಿಮಗೆ ವೋಟ್ ಕೊಟ್ಟಿಲ್ಲ. ಗ್ಯಾರಂಟಿಗಳನ್ನು ನಂಬಿ ಮತಹಾಕಿರುವ ಬಡವರಿಗೆ ಮೋಸ ಮಾಡಬೇಡಿ. ಸಿದ್ದರಾಮಯ್ಯ ಕುಳಿತಿರುವ ಕುರ್ಚಿಗೆ ಗೌರವ ಬರಬೇಕು ಎಂದಾದರೆ ಸರ್ಕಾರ ನುಡಿದಂತೆ ನಡೆದು,10 ಕೆ.ಜಿ.ಅಕ್ಕಿ ಕೊಡಲಿ ಎಂದರು.
ಕುಂಚಿಟಿಗ ಸಮುದಾಯಕ್ಕೆ ಒಬಿಸಿ ಮೀಸಲು ಹಾಗೂ ಕಾಡುಗೊಲ್ಲರಿಗೆ ಎಸ್‌ಟಿ ಮೀಸಲು ವಿಚಾರದಲ್ಲಿ ಕೇಂದ್ರದ ರಿಜಿಸ್ಟ್ರಾರ್ ಜನರಲ್ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ ಅವರು,ನೊಂದ ಸಮುದಾಯಗಳಿಗೆ ಅನುಕೂಲ ಕಲ್ಪಿಸುವ ವೇಳೆ ನಾನು ರಾಜಕೀಯ ಲಾಭಗಳ ಲೆಕ್ಕಾಚಾರ ಮಾಡುವುದಿಲ್ಲ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ,ಸಂಪತ್,ನಾಗರಾಜ್‌ಬೇದ್ರೆ,ದಗ್ಗೆ ಶಿವ ಪ್ರಕಾಶ್,ಕಲ್ಪತರು ಜಯಣ್ಣ,ತಿಪ್ಪೇಸ್ವಾಮಿ,ಮೋಹನ್ ಇದ್ದರು.

(ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಮಗ್ ಶಾಟ್)