ಅರಕಲಗೂಡು: ಬಹುಜನ ಸಮಾಜ ಪಕ್ಷ ಸಾಮಾಜಿಕ ಸೇವಾ ಸಂಘಟನೆಯ ಕಾರ್ಯಗಳಲ್ಲಷ್ಟೇ ತೊಡಗಿಸಿಕೊಳ್ಳದೆ ಈ ದೇಶದ ಅಧಿಕಾರ ಹಿಡಿಯಲು ಹೊರಟಿರುವ ದೇಶದ ಮೂರನೆ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ, ಇದಕ್ಕೆ ಕಾರ್ಯಕರ್ತರ ಬೆಂಬಲ ಅಗತ್ಯವಾಗಿದೆ ಎಂದು ರಾಜ್ಯ ಬಿಎಸ್‌ಪಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನ ಮುಂಭಾಗ ಗುರುವಾರ ಆಯೋಜಿಸಿದ್ದ ಬಹುಜನ ಸಮಾಜ ಪಕ್ಷದ ಸ್ಥಾಪಕ ಕಾನ್ಸಿರಾಂ ಪರಿನಿಬ್ಬಾಣ ದಿನದ ಪ್ರಯುಕ್ತ ಬಹುಜನರ ಸಂಕಲ್ಪ ದಿನ ಮೈಸೂರು ವಲಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆರಳೆಣಿಕೆಯಷ್ಟು ಮಂದಿ ಇರುವವರು ಆಳುವ ವರ್ಗವಾಗಿದ್ದು, ಬಹುಸಂಖ್ಯಾತ ಸಮಾಜವನ್ನು ಅಧಿಕಾರದಿಂದ ಹೊರಗಿಡಲಾಗಿದ್ದು ಇದು ಮನುವಾದಿಗಳ ತಂತ್ರವಾಗಿದೆ. ಬಹುಜನರು ಅಧಿಕಾರಕ್ಕೆ ಬರಬೇಕು ಎಂಬುದು ಕಾನ್ಸಿರಾಂ ಅವರ ಬಹುಮುಖ್ಯ ಉದ್ದೇಶವಾಗಿದ್ದು, ಇದಕ್ಕಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಧೀಮಂತ ನಾಯಕರಾಗಿದ್ದರು ಎಂದರು.
ನಮ್ಮ ಪೂರ್ವಿಕರಾದ ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿ ಬಾಪುಲೆ ಮುಂತಾದವರು ಬಹುಜನರ ಬದುಕು ಕುರಿತು ಕನಸು ಕಂಡಿದ್ದ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಧ್ಯೇಯ ವಾಕ್ಯವನ್ನು ನನಸು ಮಾಡುವುದೇ ನನ್ನ ಉದ್ದೇಶ ಎಂಬ ಗುರಿಯೊಂದಿಗೆ ಮುನ್ನಡೆದ ಕಾನ್ಸಿರಾಂ ಅವರ ಚಿಂತನೆಯ ಫಲವಾಗಿ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಮಂಡಲ್ ವರದಿ ಜಾರಿಗೆ ಇವರು ನಡೆಸಿದ ಹೋರಾಟದಿಂದ ಹಿಂದುಳಿದ ವರ್ಗಗಳು ಇಂದು ಶೇ.27ರಷ್ಟು ಮೀಸಲಾತಿ ಪಡೆಯಲು ಸಾದ್ಯವಾಗಿದೆ. ಬಿಎಸ್‌ಪಿಯನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಅಪಪ್ರಚಾರ ನಡೆಸಲಾಗುತ್ತಿದೆ, ಬಹುಜನರು ಅಧಿಕಾರ ಪಡೆಯಬೇಕಾದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತಹ ಮನುವಾದಿ ಪಕ್ಷಗಳ ತಂತ್ರಗಳಿಗೆ ಮರುಳಾಗಿ ಮತವನ್ನು ಮಾರಿಕೊಳ್ಳದೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.
ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ಅತ್ನಿ ಹರೀಶ್ ಮಾತನಾಡಿ, ಕಾರ್ಯಕ್ರಮದ ಪ್ರಯುಕ್ತ ತಾವು ಗ್ರಾಮಗಳಿಗೆ ಭೇಟಿ ನೀಡಿದಾಗ ಬಹಳಷ್ಟು ಜನರಿಗೆ ಕಾನ್ಸಿರಾಂ ಕುರಿತು ಅರಿವಿಲ್ಲದಿರುವುದು ಕಂಡುಬಂತು. ಅಂಬೇಡ್ಕರ್ ಬಳಿಕ ಬಹುಜನರ ಸಂಕಷ್ಟ, ನೋವುಗಳನ್ನು ಅರ್ಥಮಾಡಿಕೊಂಡು ಹೋರಾಟ ನಡೆಸಿದ ಮಹಾನ್ ನಾಯಕರಾಗಿದ್ದಾರೆ. ನಮ್ಮ ಪೂರ್ವಿಕರ ಇತಿಹಾಸವನ್ನು ತಿರುಚಿ ಮುಚ್ಚಿಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾವು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಎಲ್ಲ ಜಾತಿ, ಸಮುದಾಯಗಳ ಜನರ ನೋವಿಗೆ ಸ್ಪಂದಿಸುವ ಸಂಕಲ್ಪ ಕೈಗೊಳ್ಳುವುದಾಗಿ ಹೇಳಿದರು.
ರಾಜ್ಯ ಸಂಯೋಜಕ ಗಂಗಾಧರ್ ಬಹುಜನ್ ಮಾತನಾಡಿದರು. ಮುಂಖಡರಾದ ಲಕ್ಷ್ಮಣ ಕೀರ್ತಿ, ಜಾಕೀರ್ ಹುಸೇನ್, ಕೆ.ಟಿ.ರಾಧಾಕೃಷ್ಣ, ಕಾಂತಪ್ಪ ಅಲಂಗಾರ್, ಜಾಕೀರ್ ಅಲಿಖಾನ್, ಕೆ.ಟಿ.ಸುಧಾ, ವೇಲಾಯುಧನ್, ಬಿ.ಆರ್.ಪುಟ್ಟಸ್ವಾಮಿ, ನಾಗಯ್ಯ, ಭರತ್‌ಕುಮಾರ್ ಗೌಡ, ಎಂ.ಹೆಚ್.ವೆಂಕಟೇಶ್, ಶಂಕರ್, ಇಮ್ತಿಯಾಜ್ ಅಹಮದ್, ಸೋಮಶೇಖರ್ ಉಪಸ್ಥಿತರಿದ್ದರು.
ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕಾರ್ಯಕರ್ತರು ಮತ್ತು ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಮೆರವಣಿಗೆಯಲ್ಲಿ ತೆರಳಿ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.