ಜಿಲ್ಲೆ

ಬಿಎಸ್‌ಪಿ ಕಾರ್ಯಕರ್ತರ ಪ್ರತಿಭಟನೆ

Mandya

ಪಾಂಡವಪುರ: ರಾಜ್ಯ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಡಿತಗೊಳಿಸುವ ಮೂಲಕ ಅನ್ಯಾಯವೆಸಗಿದೆ ಎಂದು ಆರೋಪಿಸಿ ಸೋಮವಾರ ಬಿಎಸ್‌ಪಿ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಿಎಸ್‌ಪಿ ಕ್ಷೇತ್ರಾಧ್ಯಕ್ಷ ಎಚ್.ಮಲ್ಲಿಗೆರೆ ಯೋಗಾನಂದ ಮಾತನಾಡಿ, ಸಂವಿಧಾನದಡಿ ಒಂದು ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸಲು ಅವಕಾಶವಿಲ್ಲ. ಆದರೂ ಇತರ ಸಮುದಾಯಗಳನ್ನು ಓಲೈಸುವ ದೃಷ್ಟಿಯಿಂದ ಮುಸ್ಲಿಂ ಸಮುದಾಯಕ್ಕೆ ಪ್ರವರ್ಗ ಬಿ ಅಡಿಯಲ್ಲಿ ನೀಡಿದ್ದ ಶೇ.4 ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದುಪಡಿಸಿ ಇತರ ಸಮುದಾಯಕ್ಕೆ ವರ್ಗಾಯಿಸಿರುವುದಾಗಿ ತನ್ನ ಆದೇಶದಲ್ಲಿ ಸರ್ಕಾರ ತಿಳಿಸಿದೆ. ಇದು ಅಕ್ಷರಶಃ ಸಂವಿಧಾನ ವಿರೋಧಿ ಕೆಲಸವಾಗಿದೆ. ಸಾಮಾಜಿಕ ನ್ಯಾಯ ವಿತರಣೆ ಅನುಸಾರವಾಗಿ ಸರ್ಕಾರ ಕೆಲಸ ಮಾಡಬೇಕು. ಈಗಾಗಲೇ ಮೀಸಲಾತಿ ಪ್ರಮಾಣ ಶೇ.50 ಮೀರಿದೆ. ಒಂದು ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಯಾಗಬೇಕು. ರಾಜ್ಯದ ಬಲಿಷ್ಠ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಮೂಲಕ ಬಿಜೆಪಿ ಸ್ವಾಸ್ಥ್ಯ ಮತ್ತು ಸೌಹಾರ್ದತೆ ಕೆಡವಲು ಹೊರಟಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಿಎಸ್‌ಪಿ ಜಿಲ್ಲಾ ಮುಖಂಡ ಪ್ರಸಾದ್, ತಾಲೂಕು ಮುಖಂಡರಾದ ಮಾಣಿಕ್ಯನಹಳ್ಳಿ ಕುಮಾರ್, ಎಚ್.ಮಲ್ಲಿಗೆರೆ ಮುರುಗನ್, ಶಿವವಕುಮಾರ್, ಏಳುಮಲೆ, ಕೀರ್ತಿಕುಮಾರ್, ಚಂದ್ರು, ಸಂದೇಶ್ ಇತರರು ಇದ್ದರು.