ತಿ.ನರಸೀಪುರ: ಆಲಗೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ವೀರಭದ್ರಪ್ಪ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ.
ಹೆಳವರಹುಂಡಿ ಗ್ರಾಮದಲ್ಲಿರುವ ಆಲಗೂಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಬಿ.ವೀರಭದ್ರಪ್ಪ ಅವರ ಅಧಿಕಾರಾವಧಿ ಮುಗಿದಿದ್ದರೂ(ಆಂತರಿಕ ಒಪ್ಪಂದದಂತೆ) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದೇ ಇದ್ದಿದ್ದನ್ನು ವಿರೋಧಿಸಿ ಸಂಘದ ಒಟ್ಟು 12 ಸದಸ್ಯರ ಪೈಕಿ ಹೆಳವರಹುಂಡಿ ಗ್ರಾಮದ ಸಹಕಾರ ಸಂಘದ ನಿರ್ದೇಶಕ ಮೂರ್ತಿ ಹಾಗೂ ಕೇತಹಳ್ಳಿ ಗ್ರಾಮದ ಎಸ್.ಬಸವರಾಜು ನೇತೃತ್ವದಲ್ಲಿ 7 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಸಭೆ ಕರೆಯುವಂತೆ ಸಹಕಾರ ಇಲಾಖೆಯ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮದ ಸಹಕಾರ ಸಂಘದ ಕಚೇರಿಯಲ್ಲಿ ಅವಿಶ್ವಾಸ ನಿರ್ಣಯದ ಸಭೆ ಕರೆಯಲಾಗಿತ್ತು.ಗುಪ್ತ ಮತದಾನದ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. 12 ಮಂದಿ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು. ಚುನಾವಣೆಯಲ್ಲಿ ಅವಿಶ್ವಾಸದ ಪರವಾಗಿ 5 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 7 ಮತಗಳು ಚಲಾವಣೆಗೊಂಡವು. ಹಾಗಾಗಿ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿ ವೀರಭದ್ರಪ್ಪ ಅಧ್ಯಕ್ಷರಾಗಿ ಮುಂದುವರಿಯುವಂತಾಯಿತು. ಬಿ.ವೀರಭದ್ರಪ್ಪರನ್ನು ಮುಖಂಡರು ಅಭಿನಂದಿಸಿದರು.
ಉಪಾಧ್ಯಕ್ಷ ನಂಜುಂಡ, ಧರ್ಮಯ್ಯನಹುಂಡಿ ಮಲ್ಲಣ್ಣ, ಎಚ್.ಬಿ.ಚಿಕ್ಕನಂಜಯ್ಯ,ಎಂ.ಗುರುಸ್ವಾಮಿ, ಎನ್.ಮೂರ್ತಿ, ಬಿ.ಎಸ್.ಯಶೋದಾ, ಸಾಕಮ್ಮ, ಜಯಣ್ಣ, ಎಂ.ನಿಂಗರಾಜು, ಶಿವಲಿಂಗೇಗೌಡ, ಬಸವರಾಜು ಇದ್ದರು.