ಚಾಮರಾಜನಗರ: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ 103ನೇ ಜಯಂತಿ ಮಹೋತ್ಸವದ ಅಂಗವಾಗಿ ಬಿ.ರಾಚಯ್ಯ ಸ್ಮಾರಕದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ತಾಲೂಕಿನ ಆಲೂರು ಗ್ರಾಮದಲ್ಲಿರುವ ಬಿ.ರಾಚಯ್ಯ ಚಿರಶಾಂತಿ ಧಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಕುಟುಂಬದವರು ಭಾಗವಹಿಸಿ ದಿ. ಬಿ.ರಾಚಯ್ಯ ಮತ್ತು ದಿ. ಗೌರಮ್ಮ ಅವರ ಪುಣ್ಯ ಭೂಮಿ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿ.ರಾಚಯ್ಯ ಅವರ ಧ್ವನಿಯಲ್ಲಿರುವ ಅವರ ಸಾಧನೆ ಕುರಿತ ಸಾಕ್ಷ್ಯ ಚಿತ್ರವನ್ನು ಎಲ್‌ಇಡಿ ಪರದೆಯ ಮೂಲಕ ಬಿತ್ತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆಯೇ ಬಿ.ರಾಚಯ್ಯ ಅವರು ಜೀವನ ಸಾಗಿಸಿದರು. ಸಂವಿಧಾನ ದತ್ತವಾಗಿ ನೀಡಿರುವ ಹಕ್ಕು ಮತ್ತು ಸವಲತ್ತುಗಳನ್ನು ದೀನ ದಲಿತರು ಹಾಗೂ ಬಡವರಿಗೆ ತಲುಪಿಸುವಲ್ಲಿ ಶ್ರಮ ವಹಿಸಿದ್ದರು. ರಾಜಕೀಯ ಅಧಿಕಾರವನ್ನು ಜನ ಸೇವೆಗಾಗಿ ಮುಡುಪಾಗಿಟ್ಟಿದ್ದರು. ಅವರು ಶಾಸಕರಾಗಿ, ಸಚಿವರಾಗಿ ಉನ್ನತ ಹುದ್ದೆಗಳಲ್ಲಿ ಉತ್ತಮ ಕೆಲಸ ಮಾಡಿ. ನೊಂದವರಿಗೆ ಧ್ವನಿಯಾಗಿದ್ದರು ಎಂದು ತಿಳಿಸಿದರು.
ಕಲಾವಿದ ಸಿ.ಎಂ. ನರಸಿಂಹಮೂರ್ತಿ ತಂಡದಿಂದ ಜಾನಪದ ಗಾಯನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಬಾಲರಾಜು, ಮಂಜುಳಾ ಕೃಷ್ಣಮೂರ್ತಿ, ರಾಚಯ್ಯ ಪುತ್ರಿಯರಾದ ಪ್ರಭಾ, ಅರತಿ ವೆಂಕಟೇಶ್ ಪ್ರಸಾದ್, ಬಿ.ಶರತ್‌ಕುಮಾರ್, ಶ್ರೀವರ್ಧನ್, ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು), ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಹೊಂಗನೂರು ಚಂದ್ರು, ಡಾ. ಹೊಂಗನೂರು ನಂಜಯ್ಯ, ಹೆಬ್ಬಸೂರು ಮಧು ಹಾಗೂ ಇತರರು ಭಾಗವಹಿಸಿದ್ದರು.