ಕಲಘಟಗಿ: ತಾಲೂಕಿನ ಕುರುವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಬಿ.ಗುಡಿಹಾಳ ಗ್ರಾಮದಲ್ಲಿ 47 ವರ್ಷದ ವ್ಯಕ್ತಿಯೊಬ್ಬರಿಗೆ ಸೋಮವಾರ ಕರೊನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಸೋಂಕಿತನ ಮನೆ ಸುತ್ತ ಒಂದು ಕಿಲೋಮೀಟರ್ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ತಾಲೂಕಿನಲ್ಲಿ ಇದೇ ಪ್ರಥಮ ಪ್ರಕರಣವಾಗಿದೆ.
ಕಲಘಟಗಿ-ಧಾರವಾಡ ರಸ್ತೆಗೆ ಹೊಂದಿಕೊಂಡಿರುವ ಗ್ರಾಮಕ್ಕೆ ಸಂರ್ಪಸಲು ಇರುವ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ ಅಡೆತಡೆಗಳನ್ನು ನಿರ್ವಿುಸಲಾಗಿದೆ. ಉಗ್ಗಿನಕೇರಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಮಂಗಳಗಟ್ಟಿಯವರ ಓಣಿ, ಧಾರವಾಡ-ಕಲಘಟಗಿ ರಸ್ತೆಯಲ್ಲಿನ ಸರ್ವೆ ನಂಬರ್ 87ರ ರಸ್ತೆ, ಹುಬ್ಬಳ್ಳಿ-ಗಳಗಿ ರಸ್ತೆಯಲ್ಲಿನ ಹನುಮಂತ ದೇವರ ಗುಡಿ ಓಣಿ ಹಾಗೂ ಉಗ್ಗಿನಕೇರಿ-ಧಾರವಾಡ ರಸ್ತೆಯಲ್ಲಿನ ಜಿನ್ನಮ್ಮನವರ ಓಣಿ ಹೀಗೆ ನಾಲ್ಕು ಸ್ಥಳಗಳಲ್ಲಿ ರಸ್ತೆ ಸಂಚಾರ ನಿರ್ಬಂಧಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶನದನ್ವಯ ತಾಲೂಕು ಆಡಳಿತ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಸೀಲ್ಡೌನ್ನ ಒಂದು ಕಿಮೀ ಪ್ರದೇಶದಲ್ಲಿ ಸುಮಾರು 580 ಮನೆಗಳು, 7 ಅಂಗಡಿ, 3 ಕಚೇರಿಗಳಿವೆ. ಅಂದಾಜು 2563 ಜನರಿಗೆ ಸೀಲ್ಡೌನ್ ಬಿಸಿ ತಟ್ಟಲಿದೆ. ಈಗಾಗಲೇ ಗ್ರಾಮದಾದ್ಯಂತ ಡಂಗುರ ಸಾರಿದ್ದು, ಬೆಳಗ್ಗೆ 9ರಿಂದ 11ರವರೆಗೆ ದಿನಸಿ ಅಂಗಡಿ ತೆರೆಯಬಹುದು. ಹೋಟೆಲ್-ಮುಂಗ್ಗಟ್ಟು ತೆರೆಯುವಂತಿಲ್ಲ ಎಂದು ತಿಳಿಸಲಾಗಿದೆ.
ಹುಬ್ಬಳ್ಳಿ ಎಪಿಎಂಸಿಗೆ ಹೋಗಿದ್ದ: ಸೋಂಕಿತ ವ್ಯಕ್ತಿಯು ತರಕಾರಿ ವ್ಯಾಪಾರಕ್ಕಾಗಿ ಹುಬ್ಬಳ್ಳಿ ಎಪಿಎಂಸಿಗೆ ಹೋಗಿ ಬಂದಿದ್ದು, ಗ್ರಾಮದಲ್ಲಿ ಹಿಟ್ಟಿನ ಗಿರಣಿ ಹೊಂದಿದ್ದಾನೆ. ಈತನೊಂದಿಗೆ ಸಂಪರ್ಕದಲ್ಲಿರುವವರ ಶೋಧ ಕಾರ್ಯ ನಡೆಸಲಾಗುತ್ತಿದೆ. ಸಂರ್ಪತ ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಕಲಘಟಗಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಶ್ರಿಕೋಟಿಯಲ್ಲಿ ಆತಂಕದ ಕಾಮೋಡ: ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿ ಸೋಮವಾರ ಮಳೆ ಕಾಮೋಡ ಕವಿಯುವುದರ ಜೊತೆಗೆ ಕರೊನಾ ಸೋಂಕಿನ ಆತಂಕದ ಕಾಮೋಡವೂ ಕವಿದಿದೆ. ಬಿ. ಗುಡಿಹಾಳ ಗ್ರಾಮದ ಸೋಂಕಿತ ವ್ಯಕ್ತಿ ಮಿಶ್ರಿಕೋಟಿಯ ವೈದ್ಯರೊಬ್ಬರ ಬಳಿ ಚಿಕಿತ್ಸೆಗೆ ತೆರಳಿದ್ದ ಎನ್ನಲಾಗಿದೆ. ಕೆಮ್ಮು, ನೆಗಡಿ, ಜ್ವರವೆಂದು ಬಂದಿದ್ದ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಎಷ್ಟು ಬಾರಿ ಈ ಗ್ರಾಮಕ್ಕೆ ಬಂದು ಹೋಗಿದ್ದ ಎಂಬುದು ಗೊತ್ತಿಲ್ಲ. ಆದರೆ, ಅದೇ ಗ್ರಾಮವಲ್ಲದೇ ಸುತ್ತಲಿನ ಗ್ರಾಮಸ್ಥರು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದರೆ ಹೇಗೆ? ಎಂಬ ಭಯ ಶುರುವಾಗಿದೆ. ಸೋಂಕಿತ ವ್ಯಕ್ತಿ ಗ್ರಾಮಕ್ಕೆ ಬಂದಾಗ ಎಲ್ಲಿ ತಂಗಿದ್ದ ಎಂಬುದರ ಮಾಹಿತಿ ಇಲ್ಲ. ಆದರೂ ಗ್ರಾಮದ ತುಂಬೆಲ್ಲ ಸೋಂಕಿತ ವ್ಯಕ್ತಿ ಓಡಾಡಿದ್ದು ಹಾಗೂ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರಿಂದ ಮತ್ತಷ್ಟು ಆತಂಕ ಹೆಚ್ಚಿದೆ.
ಆಶ್ರಯ ಕಾಲನಿಯಲ್ಲಿ ಬ್ಯಾರಿಕೇಡ್ ಅಳವಡಿಕೆ: ಹುಬ್ಬಳ್ಳಿ ನಗರದ ಮಂಟೂರು ರಸ್ತೆಯ ಆಶ್ರಯ ಕಾಲನಿಯಲ್ಲಿ ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗೆ ಕರೊನಾ ಸೋಂಕು ತಗುಲಿದ್ದು, ಇಡೀ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಬಿಹಾರ ಮೂಲದ ವ್ಯಕ್ತಿಯಾಗಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ಒಟ್ಟು 45 ಜನರು ಇದ್ದಾರೆ ಎನ್ನಲಾಗುತ್ತಿದ್ದು, ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದರಿಂದ ಆತಂಕ ಎದುರಾಗಿದೆ. ಈ ವ್ಯಕ್ತಿ ಆಶ್ರಯ ಕಾಲನಿಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದರು. ಸೋಂಕು ದೃಢವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಸಿಬ್ಬಂದಿ ಸೀಲ್ಡೌನ್ ಹಾಗೂ ಸ್ಯಾನಿಟೈಸೇಷನ್ ಮಾಡುವಲ್ಲಿ ನಿರತರಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 2 ಪ್ರಕರಣ ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಸೋಮವಾರ ಸಂಜೆ 2 ಕೋವಿಡ್ (ಕರೊನಾ) ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಕಲಘಟಗಿ ತಾಲೂಕು ಬಿ. ಗುಡಿಹಾಳ ಗ್ರಾಮದ 47 ವರ್ಷದ ಪುರುಷನು ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದನು. ಚಿಕಿತ್ಸೆಗಾಗಿ ಆತನನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಲಾಗಿ, ಆತನಲ್ಲಿ ಕರೊನಾ ವೈರಾಣು ಕಂಡುಬಂದಿದೆ. ನಂತರ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಶಹರ ನಿವಾಸಿಯಾಗಿರುವ 25 ವರ್ಷದ ಯುವಕ ಬೆಂಗಳೂರಿನಿಂದ ಆಗಮಿಸಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾನೆ. ಕ್ವಾರಂಟೈನ್ನಲ್ಲಿದ್ದ ಆತನಿಗೆ ಕರೊನಾ ಬಂದಿದ್ದು, ಕಿಮ್ಸ್ಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಈಗಾಗಲೇ 11 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
24 ಗಂಟೆಯಲ್ಲಿ 450 ಶಂಕಿತರು ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 450 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಭಾನುವಾರ 16295 ನಿಗಾವಹಿಸಿದವರ ಸಂಖ್ಯೆ ಸೋಮವಾರ 16745ಕ್ಕೆ ಏರಿಕೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ 15932 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 13923 ಜನರ ವರದಿ ನೆಗೆಟಿವ್ ಬಂದಿವೆ. 48 ಪ್ರಕರಣಗಳು ಪಾಸಿಟಿವ್ ಬಂದಿದ್ದು, 37 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 1972 ವರದಿಗಳು ಬರಬೇಕಿದೆ. ಭಾನುವಾರ ಬಾಕಿ ಉಳಿದಿದ್ದ 1747 ವರದಿಗಳ ಪೈಕಿ 225 ವರದಿಗಳು ಬಂದಿವೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 16745 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 5541 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡ್ಗಳಲ್ಲಿ 38 ಜನ ದಾಖಲಾಗಿದ್ದಾರೆ. 6311 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 4855 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.