ಜಿಲ್ಲೆ

ಬಿ-ಖಾತಾಗೆ 3 ತಿಂಗಳ ಕಾಲಾವಕಾಶ

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾಹಿತಿ, ಅನಧಿಕೃತ ಆಸ್ತಿದಾರರಿಗೆ ಸಿಹಿಸುದ್ದಿ

ತುಮಕೂರು: ಇ&ಖಾತಾ ನೋಂದಣಿ ಸಮಸ್ಯೆ ಬೆನ್ನಲ್ಲೇ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳನ್ನು ಹೊಂದಿರುವವರು ಬಿ- ಖಾತಾಗೆ ದಾಖಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ.

ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿದಾರರಿಗೆ ಸಿಹಿಸುದ್ದಿ ಕೊಟ್ಟಿರುವ ರಾಜ್ಯ ಸರ್ಕಾರವು ಅನಧಿಕೃತ ಬಡಾವಣೆಗಳ ಕಟ್ಟಡ ಮಾಲೀಕರು, ನಿವೇಶನದಾರರು ಮೂರು ತಿಂಗಳೊಳಗೆ ಬಿ -ಖಾತಾಗೆ ದಾಖಲಿಸಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿ- ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಸ್ತಿದಾರರು 2024ರ ಸೆಪ್ಟೆಂಬರ್​ 10ಕ್ಕಿಂತ ಮುಂಚೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುವವರು ಮಾತ್ರ ಬಿ- ಖಾತಾ ಮಾಡಿಸಲು ಅರ್ಹರಿರುತ್ತಾರೆ. ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ಹಾಗೂ ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ/ಕಟ್ಟಡಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿ ಬಿ -ಖಾತಾದಲ್ಲಿ ನಮೂದಿಸಲಾಗುವುದು ಎಂದು ತಿಳಿಸಿದರು.

ಬಿ -ಖಾತಾದಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ ಶೇ.2ರಷ್ಟು ತೆರಿಗೆಯನ್ನು ಹಾಗೂ ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. ಬಿ- ಖಾತಾದಲ್ಲಿ ದಾಖಲಿಸಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸ್ವಾಧಿನಪಡಿಸುವ ನೋಂದಾಯಿತ ಮಾರಾಟ ಪತ್ರ, ದಾನ ಪತ್ರ, ವಿಭಾಗ ಪತ್ರಗಳನ್ನು ಹೊಂದಿರಬೇಕು. ಸರ್ಕಾರಿ ಜಾಗದಲ್ಲಿರುವ ಸ್ವತ್ತು, ಸರ್ಕಾರದ ನಿಗಮ ಮಂಡಳಿಗಳ ಜಾಗ, ನಗರ ಸ್ಥಳಿಯ ಸಂಸ್ಥೆಗಳ ಜಾಗದಲ್ಲಿರುವ ಸ್ವತ್ತುಗಳನ್ನು ಬಿ -ಖಾತಾದಲ್ಲಿ ನಮೂದಿಸಲು ಅವಕಾಶವಿರುವುದಿಲ್ಲ ಎಂದು ಶುಭಕಲ್ಯಾಣ್​ ಸ್ಪಷ್ಟಪಡಿಸಿದರು.

70 ಸಾವಿರ ಅನಧಿಕೃತ ಆಸ್ತಿ: ಫೆ.18ರಿಂದ ಮೂರು ತಿಂಗಳೊಳಗೆ ನಗರ ಸ್ಥಳಿಯ ಸಂಸ್ಥೆಯ ಅನಧಿಕೃತ ಬಡಾವಣೆಯಲ್ಲಿನ ನಿವೇಶನದಾರರಿಗೆ ಬಿ -ಖಾತಾ ನೀಡುವ ಕಾರ್ಯವನ್ನು ಆಂದೋಲನ ರೀತಿಯಲ್ಲಿ ಆರಂಭಿಸಿದ್ದೇವೆ. ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 70,000ಕ್ಕೂ ಅಧಿಕ ಅನಧಿಕೃತ ಆಸ್ತಿಗಳಿದ್ದು, ಅರ್ಹವಾದ ಆಸ್ತಿಗಳಿಗೆ ಬಿ- ಖಾತಾ ನೀಡಲು ಮಂಗಳವಾರದಿಂದಲೇ (ೆ.18) ಆಯಾ ನಗರ ಸ್ಥಳಿಯ ಸಂಸ್ಥೆಗಳ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್​ ತೆರೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶುಭಕಲ್ಯಾಣ್​ ಹೇಳಿದರು.

ಸಹಾಯವಾಣಿ: ಬಿ- ಖಾತಾಗೆ ಸಂಬಂಧಿಸಿದಂತೆ ಸಹಾಯವಾಣಿ ಆರಂಭಿಸಲಾಗಿದೆ. ತುಮಕೂರು ಪಾಲಿಕೆ: ಮೊ: 9945212919 / 9449872599, ತಿಪಟೂರು ನಗರಸಭೆ: ಮೊ:9448596379, ಶಿರಾ ನಗರಸಭೆ: ಮೊ:8133270041, ಕುಣಿಗಲ್​ ಪುರಸಭೆ: ದೂ:08132&-220225, ಪಾವಗಡ ಪುರಸಭೆ: ಮೊ: 9742821910, ಚಿಕ್ಕನಾಯಕನಹಳ್ಳಿ ಪುರಸಭೆ: ಮೊ:8660353951, ಮಧುಗಿರಿ ಪುರಸಭೆ: ಮೊ:6361773631, ಕೊರಟಗೆರೆ ಪಪಂ: ಮೊ:9964645923 ಗುಬ್ಬಿ ಪಪಂ: ಮೊ: 7406644909, ತುರುವೇಕೆರೆ ಪಪಂ: ಮೊ: 7026250340 ಹುಳಿಯಾರು ಪಪಂ: ಮೊ: 8133256056 ಯನ್ನು ಸಂಪರ್ಕಿಸಬಹುದು.

ಇ&ಖಾತಾಗೆ ಬೇಕು 10 ದಾಖಲೆಗಳು!: ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ಸ್ಥಳಿಯ ಸಂಸ್ಥೆಗಳಲ್ಲಿ ಇ&ಖಾತಾ ಅಭಿಯಾನ ಆರಂಭಿಸಿದ್ದು ಸರಳ ವಿಧಾನಗಳು ಜಾರಿ ತಂದಿದೆ. ಸರ್ಕಾರವೇ ಕೊಟ್ಟಿರುವ ಜಾಹೀರಾತಿನಲ್ಲಿ ಇ&ಖಾತಾಗೆ 6 ದಾಖಲೆಗಳು ಮಾತ್ರ ಬೇಕಿವೆ. ಆದರೆ ತುಮಕೂರು ಮಹಾನಗರ ಪಾಲಿಕೆಯಲ್ಲಿ 10 ದಾಖಲೆಗಳನ್ನು ಸಲ್ಲಿಸಬೇಕಿದೆ. ಅನಗತ್ಯ ದಾಖಲೆಗಳಿಗೆ ಜನರನ್ನು ಓಡಾಡಿಸಿ, ಹೈರಾಣಾಗಿಸುವ ಪಾಲಿಕೆ ಸಿಬ್ಬಂದಿ ಇ&ಖಾತಾ ನೋಂದಣಿಯನ್ನು ಕಗ್ಗಂಟಾಗಿಸಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಜಿ.ಎಸ್​.ಬಸವರಾಜು.

ಅನಧಿಕೃತ ಸ್ವತ್ತುಗಳಿಗೆ ನಮೂನೆ -2ಎ/3ಎ ನೀಡಿದ್ದಲ್ಲಿ ಆಸ್ತಿಯನ್ನು ಸಕ್ರಮಗೊಳಿಸಲಾಗಿದೆ ಎಂದು ಆಸ್ತಿ ಮಾಲೀಕರು ಭಾವಿಸುವಂತಿಲ್ಲ. ಬಿ- ಖಾತಾಗೆ ಅನಧಿಕೃತ ಆಸ್ತಿಯನ್ನು ದಾಖಲಿಸಲಿಚ್ಛಿ ಸುವವರಿಗಾಗಿ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಪ್ರತ್ಯೇಕ ಕೌಂಟರ್​ಗಳನ್ನು ತೆರೆಯಲಾಗುವುದು. ಈ ಕೌಂಟರ್​ಗಳು ರಜಾ ದಿನಗಳಂದೂ ಕಾರ್ಯನಿರ್ವಹಿಸಲಿವೆ. ಆಸ್ತಿದಾರರು ಬಿ-ಖಾತೆಗೆ ದಾಖಲಿಸಲು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಕೌಂಟರ್​ಗಳಲ್ಲಿ ಅರ್ಜಿ ಸಲ್ಲಿಸಬಹುದು.| ಬಿ.ವಿ.ಅಶ್ವಿಜ ಪಾಲಿಕೆ ಆಯುಕ್ತೆ