ಜಿಲ್ಲೆ

ಬಿ.ಕಾಟೀಹಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಕೊಲೆ:ಶೀಘ್ರದಲ್ಲಿ ಆರೋಪಿಗಳ ಬಂಧನ ಎಸ್ಪಿ

ಹಾಸನ: ನಗರದ ಬಿ.ಕಾಟಿಹಳ್ಳಿ ಬಡಾವಣೆಯಲ್ಲಿ ದುಷ್ಕರ್ಮಿಗಳು ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಇಟ್ಟಿಗೆಯಿಂದ ತಲೆಗೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಅರಕಲಗೂಡು ತಾಲೂಕಿನ ಮಂಡಿಕೇರಿ ಗ್ರಾಮದ ನಿವಾಸಿ ಕಾಂತರಾಜು (40) ಕೊಲೆಯಾದ ದುರ್ದೈವಿ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ಈ ಕೃತ್ಯ ಎಸೆಗಿರುವ ಬಗ್ಗೆ ತಿಳಿದು ಬಂದಿದೆ.ಮೃತ ಕಾಂತರಾಜ್ ಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಬಿ.ಕಾಟೀಹಳ್ಳಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾಂತರಾಜು ಅದೇ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ್ದರಿಂದ ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದವರೊಂದಿಗೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಈ ವೇಳೆ ಕಾಂತರಾಜ್ ಅವರ ಮೇಲೆ ದುಷ್ಕರ್ಮಿಗಳು ಇಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಎಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಘಟನೆ ಸಂಬಂಧ ಮೃತರ ಸಹೋದರ ದಿನೇಶ್ ಅವರು ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ಜೀವನ್, ಸಂಜು ಹಾಗೂ ದುಷ್ಯಂತ ಎಂಬುವವರ ಮೇಲೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈಗಾಗಲೇ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಸುತ್ತಮುತ್ತಲಿನ ಸ್ಥಳ ಪರಿಶೀಲನೆ ಸೇರಿದಂತೆ ಇತರೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ಶೀಘ್ರದಲ್ಲೇ ಆರೋಪಿಗಳ ಬಂಧನ:

ಗುತ್ತಿಗೆದಾರ ಅಶ್ವಥ್ ನಾರಾಯಣ ಗೌಡನ ಮೇಲೆ ಇದೇ ತಿಂಗಳು 10ರಂದು ಹೊಳೆನರಸೀಪುರದ ಸೂರನಹಳ್ಳಿ ಸಮೀಪ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಈಗಾಗಲೇ ತನಿಖೆ ನಡೆಯುತ್ತಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಆಯಾಮದಲ್ಲಿಯೂ ಕೂಡ ತನಿಖೆ ನಡೆಸಲಾಗುತ್ತಿದೆ. ರಾಜಕೀಯ, ಹಣಕಾಸು ಹಾಗೂ ಇನ್ನಿತರೆ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ನಮ್ಮ ತಂಡ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದರು.

ನಾಕಾಬಂಧಿ:

ಜಿಲ್ಲೆಯಲ್ಲಿ ಮನೆ ಕಳ್ಳತನ ಹಾಗೂ ವಾಹನ ಕಳವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕುಗಳಿಂದ ನಗರಕ್ಕೆ ಬರುವಂತಹ ರಸ್ತೆಗಳಲ್ಲಿ ನಾಕಾಬಂಧಿ ಹಾಕುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚು ಬೀಟ್ ವ್ಯವಸ್ಥೆಯನ್ನು ಮಾಡುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಇಬ್ಬರ ಮೇಲೆ ಗೂಂಡಾ ಕಾಯ್ದೆ:

ಜಿಲ್ಲೆಯಲ್ಲಿ ರೌಡಿಗಳ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈಗಾಗಲೇ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ಮೂಲದ ಇಬ್ಬರ ಮೇಲೆ ಗೂಂಡಾ ಕಾಯ್ದೆ ದಾಖಲು ಮಾಡಲಾಗಿದೆ. ಮುಂದೆಯೂ ಕೂಡ ಕಾನೂನು ಸುವ್ಯಸ್ಥೆಗೆ ಭಂಗ ತರುವಂತಹ ಕೆಲಸವನ್ನು ಯಾರೇ ಮಾಡಿದರೂ ಕೂಡ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಸಿದರು.