ಜಿಲ್ಲೆ

ಬಾಹ್ಯಾಕಾಶ ಕ್ಷೇತ್ರದ ಆವಿಷ್ಕಾರಗಳು ಜನಪರ’

ಹಾಸನ: ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಯುವ ಆವಿಷ್ಕಾರಗಳು ಜನಸಾಮಾನ್ಯರ ಬದುಕಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತ ಬಂದಿವೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ತಿಳಿಸಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಅಭಿಶಿಕ್ಷಣ (ಓರಿಯಂಟೇಶನ್) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಉಪಗ್ರಹಗಳಿಂದ ಕರಾವಳಿ ಪ್ರದೇಶಕ್ಕೆ ಯಾವಾಗ ಚಂಡಮಾರುತ ಅಪ್ಪಳಿಸಲಿದೆ ಎಂಬುದನ್ನು ಮೊದಲೇ ನಿಖರವಾಗಿ ಕಂಡುಕೊಳ್ಳಲು, ಆ ಮೂಲಕ ಸಾವಿರಾರು ಜನರ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಸಮುದ್ರದಲ್ಲಿ ಮೀನುಗಾರಿಕೆ ನಡೆಸುವವರಿಗೆ ತಾವು ಎಲ್ಲಿದ್ದೇವೆ ಎಂಬುದನ್ನು ಅರಿಯಲು ಅನುವು ಮಾಡಿಕೊಡುವ ಸಾಧನಗಳಲ್ಲಿ ಕೂಡ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಮೀನುಗಾರರು ಅರಿವಿಲ್ಲದೆ ದೇಶದ ಗಡಿ ದಾಟಿ ಹೋಗಿ ಮೀನುಗಾರಿಕೆ ನಡೆಸುವುದನ್ನು ತಪ್ಪಿಸುವಲ್ಲಿ ಈ ತಂತ್ರಜ್ಞಾನ ಗಮನಾರ್ಹ ಪಾತ್ರ ನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಹೋಮಿಬಾಬಾ ಮತ್ತು ವಿಕ್ರಮ್ ಸಾರಾಭಾಯ್ ಅವರ ಮುನ್ನೋಟ ಮತ್ತು ಪರಿಶ್ರಮದಿಂದಾಗಿ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ 1957ರಲ್ಲಿ ಸೂಕ್ತ ಅಡಿಪಾಯ ದೊರೆಯಿತು. ಸಂಪರ್ಕ ಬೆಸೆಯುವ ಮೂಲಕ ದೇಶದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಬಾಹ್ಯಾಕಾಶ ಕ್ಷೇತ್ರ ಒದಗಿಸಿತು ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ವಿಶ್ರಾಂತ ಉಪಕುಲಪತಿ ಡಾ. ಕರಿಸಿದ್ದಪ್ಪ ಅವರು ಮಾತನಾಡಿ, ಅಂಕ ಗಳಿಕೆಗೆ ಆದ್ಯತೆ ನೀಡುವ ಬದಲು ಜ್ಞಾನ ಸಂಪಾದನೆಗೆ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಂಜಿನಿಯರಿಂಗ್ ಶಿಕ್ಷಣ, ಕೌಶಲ ಮತ್ತು ಜ್ಞಾನಾಧಾರಿತ ಕಲಿಕೆಗೆ ಒತ್ತು ನೀಡುತ್ತದೆಯೇ ಹೊರತು ನೆನಪಿನ ಶಕ್ತಿ ಆಧರಿಸಿದ ಕಲಿಕೆಗಲ್ಲ. ಪದವಿ ವೇಳೆ ಉದ್ಯೋಗಕ್ಕೆ ಅಗತ್ಯವಿರುವ ಎಲ್ಲ ತಂತ್ರಜ್ಞಾನಗಳನ್ನೂ ವಿದ್ಯಾರ್ಥಿಗಳಿಗೆ ಪರಿಚಯಿಸಲು ಸಾಧ್ಯವಿಲ್ಲ. ವೃತ್ತಿ ಬದುಕಿನಲ್ಲಿ ಮುನ್ನಡೆಯಲು ಅಗತ್ಯವಿರುವ ಕೌಶಲಗಳನ್ನು ಕಲಿಸುವುದು ಎಂಜಿನಿಯರಿಂಗ್ ಪದವಿ ಶಿಕ್ಷಣದ ಗುರಿ. ಹೀಗಾಗಿ, ಆಯಾ ವೃತ್ತಿಗೆ ಪೂರಕವಾದ ಅಲ್ಪಾವಧಿ ತರಬೇತಿ ನೀಡುವ ಹೊಣೆಗಾರಿಕೆಯನ್ನು ಉದ್ಯಮ ವಲಯವೇ ನಿಭಾಯಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಎ.ಜೆ. ಕೃಷ್ಣಯ್ಯ, ನಿರ್ದೇಶಕ ಡಾ. ಎಸ್. ಪ್ರದೀಪ್, ಡೀನ್‌ಗಳಾದ ಡಾ.ಜೆ.ಚಂದ್ರಿಕಾ, ಡಾ.ಎಸ್. ರಾಜಣ್ಣ , ತರಬೇತಿ ಮತ್ತು ಉದ್ಯೋಗಾಧಿಕಾರಿ ಬಿ.ಬಿ.ನೀಲಕಂಠಪ್ಪ , ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಉಪಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಕಾರ್ಯದರ್ಶಿ ಆರ್.ಟಿ.ದ್ಯಾವೇಗೌಡ, ವ್ಯವಸ್ಥಾಪಕ ಶಿವರಾಮ ಕೃಷ್ಣಯ್ಯ, ಆಡಳಿತ ಮಂಡಳಿ ನಿರ್ದೇಶಕ ಸಿ.ಆರ್. ಜಗದೀಶ್, ಡಿ.ಬಿ. ಹೇಮಂತ್ ಕುಮಾರ್ ಉಪಸ್ಥಿತರಿದ್ದರು.