ಜಿಲ್ಲೆ

ಬಾವುಟ ಹಾರಿಸುವುದೇ ದೇಶಪ್ರೇಮವಲ್ಲ: ನಟ ಪ್ರಕಾಶ್ ರಾಜ್

ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು ನಿಜವಾದ ದೇಶಪ್ರೇಮವೇ ಹೊರತು, ಬರಿ ಬಾಯಿ ಮಾತಿನಲ್ಲಿ ಘೋಷಣೆ ಕೂಗಿಸುವುದು ತೋರಿಕೆ ದೇಶಪ್ರೇಮವಾಗುತ್ತದೆ ಎಂದು ಬಹುಭಾಷಾ ನಟ ಪ್ರಕಾಶ್‌ರಾಜ್ ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದರು.


ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಶೇ.20ಕ್ಕಿಂತಲೂ ಕಡಿಮೆ ಜನ 25 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ಭಾವನಾತ್ಮಕವಾಗಿ ದೇಶಪ್ರೇಮ ಎನ್ನಲಾಗುತ್ತಿದೆಯೇ ವಿನಾ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಬೆಲೆ ಏರಿಕೆ ನಿಯಂತ್ರಣ ಮಾಡುತ್ತಿಲ್ಲ. ಬೆಲೆ ಇಳಿಸಿ, ನಿರುದ್ಯೋಗ ಸಮಸ್ಯೆ ನಿವಾಸಿಸುವ ಮೂಲಕ ದೇಶಪ್ರೇಮ ಪ್ರದರ್ಶಿಸಲಿ ಎಂದು ಭಾನುವಾರ ಮೈಸೂರು ಜಿಲ್ಲಾಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಂವಾದಲ್ಲಿ ಭಾಗವಹಿಸಿ ಅವರು ಸವಾಲು ಹಾಕಿದರು.


ಹರ್ ಘರ್ ತಿರಂಗ ಬಗ್ಗೆ ಪ್ರಚಾರ ಮಾಡುತ್ತಿರುವ ಕೇಂದ್ರ ಸರ್ಕಾರ, ಖಾದಿ ಬಿಟ್ಟು ಪಾಲಿಸ್ಟರ್ ಬಾವುಟ ಹಾರಿಸಲು ಅವಕಾಶ ನೀಡಿದೆ. ಇದೆನಾ ಇವರ ಮೇಕ್ ಇನ್ ಇಂಡಿಯಾ?. ಕೈಮಗ್ಗ ನೆಚ್ಚಿಕೊಂಡು ಎಷ್ಟೋ ಜನ ಇರುವಾಗ ಪಾಲಿಸ್ಟರ್‌ಗೆ ಅನುಮತಿ ಯಾಕೆ. ಅಲ್ಲದೆ ಶೇ. 18 ಬೀಡಿಗೆ ಜಿಎಸ್‌ಟಿ ವಿಧಿಸುವ ಮೂಲಕ ಬೀಡಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ದೂರಿದರು.


ಪ್ರಧಾನಿ ಭೇಟಿ ವೇಳೆ ಕೋಟ್ಯಂತರ ರೂ. ಖರ್ಚು ಮಾಡಿ ತರಾತುರಿಯಲ್ಲಿ ರಸ್ತೆ ದುರಸ್ಥಿ ಮಾಡುತ್ತಾರೆ. ನಮ್ಮ ಹಣ ಖರ್ಚು ಮಾಡಿ ಕಳಪೆ ರಸ್ತೆ ನಿರ್ಮಿಸಿದ್ದರೆ ಪ್ರಶ್ನೆ ಮಾಡಬಾರದೇ?. ಪಿಎಂ, ಸಿಎಂ, ಸಂಸದ ಯಾರೂ ತಮ್ಮ ಮನೆಯಿಂದ ಒಂದು ರೂಪಾಯಿ ತರುವುದಿಲ್ಲ. ಜನರು ತಮ್ಮ ದುಡ್ಡು ಕೊಟ್ಟು ನಮ್ಮನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ. ಬೇಕಾಬಿಟ್ಟಿಯಾಗಿ ಖರ್ಚು ಮಾಡಿದರೆ ಪ್ರಶ್ನೆ ಮಾಡಬೇಕು ಎಂದು ಹೇಳಿದರು.


ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಸಂದಾಯ ಮಾಡುವುದಾಗಿ ಮೋದಿ ಮಾತು ಕೊಟ್ಟಿದ್ದರು. ಇದನ್ನು ಪ್ರಶ್ನಿಸಿದರೆ ಹೇಡಿಗಳಂತೆ ಚಿತ್ರ ಬ್ಯಾನ್ ಮಾಡುವುದಾಗಿ ಹೆದರಿಸಲಾಗುತ್ತಿದೆ. ಭಿನ್ನಾಭಿಪ್ರಾಯ ಬೇರೆ, ಈಗ ಕುಸಿಯುತ್ತಿರುವ ದೇಶದ ಬಗ್ಗೆ ಚಿಂತಿಸಬೇಕಾಗಿದೆ. ಪ್ರತಿಯೊಬ್ಬರು ಸರ್ಕಾರದ ಮಾರ್ಕ್ಸ್ ಕಾರ್ಡ್ ಕೊಡುವಂತೆ ಕೇಳಬೇಕಿದೆ ಎಂದು ಹೇಳಿದರು.