ಜಿಲ್ಲೆ

ತಿಪಟೂರು ನಗರಸಭೆ ವ್ಯಾಪ್ತಿಯ ಬಾವಿ, ಕಲ್ಯಾಣಿಗಳ ರಕ್ಷಣೆ ಅಭಿಯಾನಕ್ಕೆ ಚಾಲನೆ

ಮೂರ್ತಿ ಟಿ.ಸಿ.ಎಸ್.ತಿಪಟೂರು

ನಗರಸಭೆ ವ್ಯಾಪ್ತಿಯ ಬಾವಿಗಳು, ಕಲ್ಯಾಣಿಗಳನ್ನು ಗುರುತಿಸಿ ಸಂರಕ್ಷಿಸುವ ಅಭಿಯಾನಕ್ಕೆ ನಗರಸಭೆ ಶನಿವಾರದಿಂದ ಚಾಲನೆ ನೀಡಿದೆ.

ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್, ಆಯುಕ್ತ ಉಮಾಕಾಂತ್, ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್ ಅಭಿಯಾನದ ಮುಂದಾಳತ್ವ ವಹಿಸಿದ್ದು, ಭಾನುವಾರದ ಕಾರ್ಯಾಚರಣೆಯಲ್ಲಿ 1927ರಲ್ಲಿ ನಿರ್ಮಿಸಲಾದ ಸೇದುವ ನೀರಿನ ಬಾವಿ ಪತ್ತೆಯಾಗಿದೆ.

ಪುರಾತನ ಬಾವಿಗಳನ್ನು ಸಂರಕ್ಷಿಸಿ ನಗರಸಭೆ ಸ್ವತ್ತನ್ನು ಉಳಿಸಬೇಕೆಂಬ ಸಲಹೆ ಕೇಳಿಬಂದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ, ಆಯುಕ್ತ, ತಹಸೀಲ್ದಾರ್ ಸಹಕಾರದಲ್ಲಿ 54 ವರ್ಷಗಳಿಗೂ ಹಳೆಯ ದಾಖಲೆ ಮತ್ತು ನಕಾಶೆ ಸೇರಿ ಇತರ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಶನಿವಾರದ ಕಾರ್ಯಾಚರಣೆಯಲ್ಲಿ ನಗರದ ಕಾರೋನೇಷನ್ ರಸ್ತೆಯಲ್ಲಿ ಬಾವಿ ಪತ್ತೆ ಮಾಡಲಾಗಿದೆ. ಜಾಗದ ಮೌಲ್ಯ ಅಂದಾಜು 1 ಕೋಟಿ ರೂಪಾಯಿ. ಭಾನುವಾರ, ರಾಮಮಂದಿರ ರಸ್ತೆ ತಿರುವಿನಲ್ಲಿ 1927ರಲ್ಲಿ ನಿರ್ಮಾಣಗೊಂಡಿದ್ದ ಬಾವಿ ಪತ್ತೆ ಹಚ್ಚಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ನಗರಸಭೆ ವಶಕ್ಕೆ ಪಡೆದಿದೆ.

ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಚನ್ನಪ್ಪನ ಕಲ್ಯಾಣಿ, ಮತ್ತು ಕರ್ನಾಟಕ ಬ್ಯಾಂಕ್ ಎದುರಿನಲ್ಲಿದ್ದ ಸುಂದರ ಕಲ್ಯಾಣಿ ಪ್ರಸ್ತುತ ನಾಮಾವಶೇಷವಾಗಿದ್ದು, ಖಾಸಗಿಗೆ ಬಳಕೆಯಾಗುತ್ತಿದೆ. ಕೆ.ಆರ್.ಬಡಾವಣೆಯ ಕಲ್ಯಾಣ ಮಂಟಪದ ಎದುರಿನ ವೃತ್ತದಲ್ಲಿದ್ದ ಪುರಾತನ ಕಲ್ಲು ಬಾವಿ ಈಗ ನಾಮಾವಶೇಷವಾಗಿದೆ. ಈ ಜಾಗದಲ್ಲಿ ಕೃತಕ ಕಲ್ಲು ಜೋಡಿಸಿ ಬಣ್ಣ ಬಳಿಯಲಾಗಿದೆ. ಸಂತೇಪೇಟೆಯ ಪಾಂಡುರಂಗಸ್ವಾಮಿ ದೇಗುಲ ಪಕ್ಕದಲ್ಲಿರುವ ಸೇದುವ ಬಾವಿ ಜಾಗ ತಮ್ಮದೆಂದು ಕೋರ್ಟ್ ಪ್ರತಿ ತೋರಿಸಿದ ಘಟನೆಗೆ ಸಂಬಂಧಿಸಿದಂತೆ ದಾಖಲೆ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ. ಸೂಕ್ತ ದಾಖಲೆ, ಮತ್ತು ನಕಾಶೆಯೊಂದಿಗೆ ಹುಡುಕಿದರೆ ಇಂತಹ ಸುಮಾರು 20ಕ್ಕೂ ಹೆಚ್ಚು ನಗರಸಭೆ ಸ್ವತ್ತನ್ನು ಪತ್ತೆ ಹಚ್ಚಬಹುದಾಗಿದೆನಗರಸಭೆ ಜನಪ್ರತಿನಿಧಿಗಳು ಮತ್ತು ಹಿರಿಯ ನಾಗರಿಕರು ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.