ಸಿದ್ದಾಪುರ: ಪಟ್ಟಣದ ಸೊರಬ ರಸ್ತೆಯ ಬಸವಣ್ಣಗಲ್ಲಿ ಸಮೀಪದ ಅಕೇಶಿಯಾ ನೆಡುತೋಪಿನ ಮರಗಳಲ್ಲಿ ಬಾವಲಿ ಹಕ್ಕಿಗಳು ಬೀಡು ಬಿಟ್ಟಿವೆ. ಇಲ್ಲಿಯ ಅಕೇಶಿಯಾ ನೆಡುತೋಪಿನಲ್ಲಿ ಮೂರು ವರ್ಷಗಳಿಂದ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಸಾವಿರಾರು ಬಾವಲಿಗಳು ಇರುತ್ತವೆ. ರಾತ್ರಿ ವೇಳೆ ಸಂಚರಿಸುವ ಬಾವಲಿಗಳು ಹತ್ತಿರದ ಮನೆಗಳ ಮೇಲೆ, ರಸ್ತೆಯಲ್ಲಿ ಸಂಚರಿಸುವ ಜನರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತವೆ. ಮನೆ ಅಂಗಳದಲ್ಲಿರುವ ಮಾವು, ಪೇರಲ ಮತ್ತಿತರ ಹಣ್ಣುಗಳನ್ನು ಕಚ್ಚಿ ಹಾಕುತ್ತಿವೆ. ಅಲ್ಲದೆ, ಅಕೇಶಿಯಾ ನೆಡುತೋಪಿನಲ್ಲಿ ಬಾವಲಿಗಳು ಆಗಾಗ ಸತ್ತು ಬೀಳುತ್ತಿವೆ. ಇದು ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.
ವೈರಸ್ ಆತಂಕ: ಬಾವಲಿಯಿಂದ ನಿಫಾ ವೈರಸ್ ಹರಡುತ್ತದೆ ಎಂದು ದೃಢಪಟ್ಟಿದೆ. ಅಲ್ಲದೆ, ಕೇರಳದಲ್ಲಿ ನಿಫಾ ವೈರಸ್ನಿಂದ ಈಗಾಗಲೇ ಸಾವು- ನೋವುಗಳು ಸಂಭವಿಸಿವೆ. ಈಗಾಗಲೇ ಮಂಗನಕಾಯಿಲೆ ಹಾಗೂ ಕರೊನಾ ಹಾವಳಿಯಿಂದ ತಲ್ಲಣಗೊಂಡಿರುವ ಜನರು ಬಾವಲಿಗಳಿಂದ ನಿಫಾ ವೈರಸ್ ಬಂದೀತೆಂದು ಭಯಗೊಂಡಿದ್ದಾರೆ.
ಆಗ್ರಹ: ತಾಲೂಕು ಆಡಳಿತ, ಆರೋಗ್ಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಗಮನಹರಿಸಿ ಬಾವಲಿಯನ್ನು ಓಡಿಸಿ ಜನತೆಯ ಆತಂಕ ದೂರ ಮಾಡಬೇಕು ಎಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಾವಲಿಯಿಂದಾಗುತ್ತಿರುವ ತೊಂದರೆ ಕುರಿತು ಎರಡು ವರ್ಷದ ಹಿಂದೆಯೇ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆಡಳಿತಕ್ಕೆ ಮನವಿ ನೀಡಲಾಗಿದೆ. ಆದರೆ, ಯಾರೂ ನಮ್ಮ ಕಷ್ಟವನ್ನು ದೂರಮಾಡಲು ಬಂದಿಲ್ಲ. ಈ ವರ್ಷ ಮತ್ತಷ್ಟು ಆತಂಕ ಇರುವುದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕು.| ದಾಮೋದರ ಭಟ್ಟ ಸಿದ್ದಾಪುರ ಸೊರಬ ರಸ್ತೆ ನಿವಾಸಿಅಕೇಶಿಯಾ ಮರಗಳಲ್ಲಿ ಬಾವಲಿಗಳು ಜೋತಾಡುತ್ತಿರುವ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಜನರು ಅತಂಕ ಪಡುವ ಅಗತ್ಯ ಇಲ್ಲ. ತೊಂದರೆ ಆಗುವ ಸಾಧ್ಯತೆ ಇದ್ದರೆ ಬಾವಲಿಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.| ಮಂಜುಳಾ ಎಸ್. ಭಜಂತ್ರಿ ತಹಸೀಲ್ದಾರ್