ಜಿಲ್ಲೆ

ಬಾಳೇಕುಂದ್ರಿ ಶ್ರೇಷ್ಠ ನೀರಾವರಿ ತಜ್ಞ

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್. ಜಿ. ಬಾಳೇಕುಂದ್ರಿ ಅವರು ಈ ನಾಡು ಕಂಡ ಒಬ್ಬ ಸರ್ವಶ್ರೇಷ್ಠ ನೀರಾವರಿ ತಜ್ಞ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಪ್ರಮುಖ ರೂವಾರಿಗಳು ಎಂದು ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಎಸ್.ಜಿ. ಬಾಳೇಕುಂದ್ರಿ ದತ್ತಿ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಎಸ್.ಜಿ. ಬಾಳೇಕುಂದ್ರಿ ಮತ್ತು ಸರ್.ಎಂ. ವಿಶ್ವೇಶ್ವರಯ್ಯನವರ ಸ್ಮರಣೆ ಹಾಗೂ ಇಂಜಿಯರ್ ದಿನಾಚರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಎಸ್.ಜಿ. ಬಾಳೇಕುಂದ್ರಿ ವ್ಯಕ್ತಿತ್ವ ಮತ್ತು ಅವರು ರೂಪಿಸಿದ ನೀರಾವರಿ ಯೋಜನೆಗಳ ಕುರಿತು ಮಾತನಾಡಿದರು.
ಬಾಳೇಕುಂದ್ರಿಯವರದ್ದು ಪರಿಶ್ರಮದ ಜೀವನ. ಅವರ ಬೌದ್ಧಿಕ ಸಾಮರ್ಥ್ಯ ಅಪಾರ. ನಿಷ್ಟುರತೆ, ಪ್ರಾಮಾಣಿಕತೆಗೆ ಜನಪ್ರತಿನಿಧಿಗಳೂ ಭಯಭೀತರಾಗುತ್ತಿದ್ದರು. ತಮ್ಮ ಸೇವಾ ಅವಧಿಯಲ್ಲಿ ಯಾರ ಪ್ರಭಾವಕ್ಕೂ ಒಳಗಾಗಲಿಲ್ಲ. ಕೃಷ್ಣ, ಮಲಪ್ರಭಾ ಹಾಗೂ ಆಣೆಕಟ್ಟು ನಿರ್ಮಾಣದಲ್ಲಿ ಅವರ ದೂರದೃಷ್ಟಿತ್ವ ಮುಂದಾಲೋಚನೆ ಅನನ್ಯವಾದದ್ದು. ಅವರ ಸ್ಮರಣೆ ಇಂದಿನ, ಮುಂದಿನ ಪೀಳಿಗೆಯ ಪ್ರೇರಣೆ. ಅವರೊಬ್ಬ ಜನಮಾನಸದ ವ್ಯಕ್ತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ನರಸಿಂಹ ಪರಾಂಜಪೆ ಮಾತನಾಡಿ, ಬಾಳೇಕುಂದ್ರಿ ಅವರ ಕಾರ್ಯಕ್ಕೆ ಅನೇಕ ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವನದ ಕೊನೇ ಕ್ಷಣದವರೆಗೂ ಕೃಷಿ, ನೀರಾವರಿಯ ಚಿಂತನೆಗಳನ್ನು ಹಂಚಿಕೊಂಡವರು. ಅವರ ಸ್ಮರಣೆ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಶ್ರೀಶೈಲ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.