ಬೈಲಹೊಂಗಲ: ತಾಲೂಕಿನ ಸಿದ್ದಸಮುದ್ರದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಭಾನುವಾರ ಜರುಗಿದ ಸದಸ್ಯರ ಚುನಾವಣೆಯಲ್ಲಿ ಬಾಳೇಕುಂದರಗಿ ಪ್ಯಾನಲ್‌ನ 9 ಅಭ್ಯರ್ಥಿಗಳು ವಿಜಯಶಾಲಿಯಾದರು. ಮಾಜಿ ಶಾಸಕ ಮಹಾಂತೇಶ ದೊಡಗೌಡರ ಅವರ ಶ್ರೀ ಸೋಮೇಶ್ವರ ರೈತರ ಅಭಿವೃದ್ಧಿ ಪ್ಯಾನಲ್‌ನ 8 ಅಭ್ಯರ್ಥಿಗಳು ಗೆಲವು ಸಾಧಿಸಿದರು.
ಅಭ್ಯರ್ಥಿಗಳ ಪಟ್ಟಿ: ಬಾಳೇಕುಂದರಗಿ ಸಹಕಾರ ಪ್ಯಾನಲ್‌ನ ಬಸವರಾಜ ಬಾಳೇಕುಂದರಗಿ, ಮಹಾಬಳೇಶ್ವರ (ರಾಜು) ಕುಡಸೋಮಣ್ಣವರ, ಮಹಾಂತೇಶ ಮತ್ತಿಕೊಪ್ಪ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಟಗಿ, ಅದೃಶ್ಯಪ್ಪ ಕೊಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ.
ಶ್ರೀ ಸೋಮೇಶ್ವರ ರೈತರ ಅಭಿವೃದ್ಧಿ ಪ್ಯಾನಲ್‌ನ ಅ ವರ್ಗದ ಕ್ಷೇತ್ರ-ಉಮೇಶ ಬಾಳಿ, ರಾಚಪ್ಪ ಮಟ್ಟಿ, ಪ್ರಕಾಶ ಮೂಗಬಸವ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ ಶ್ರೀಶೈಲಪ್ಪ ಶರಣಪ್ಪನವರ ಗೆಲವು ಸಾಧಿಸಿದರು. ಎಲ್ಲ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಗುಲಾಲ ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಮತ ಎಣಿಕೆ ವಿಳಂಬ: ಕೆಆರ್‌ಸಿಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ಮತ ಎಣಿಕೆ ಕೇಂದ್ರದ ಕೆಲ ಕೊಠಡಿಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದರಿಂದ ಕೆಲಕಾಲ ಮತ ಎಣಿಕೆ ವಿಳಂಬವಾಯಿತು. ಇದರಿಂದ ಅಧಿಕಾರಿಗಳು ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಮತ ಎಣಿಕೆ ಕಾರ್ಯ ಆರಂಭಿಸಬೇಕೆನ್ನುಷ್ಟರಲ್ಲಿಯೇ ವಿದ್ಯುತ್ ಸಂಪರ್ಕ ಪುನರಾರಂಭಗೊಂಡಿತು. ನಂತರ ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಿತು.
ಸೋಮೇಶ್ವರ ಶುಗರ್ಸ್‌ಗೆ ಶಾಂತಿಯುತ ಮತದಾನ: ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಶೇ.65.90 ಶಾಂತಿಯುತ ಮತದಾನವಾಗಿದೆ. ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ, ಎಂ.ಕೆ.ಸಿ.ಆರ್.ಬಾಲಕಿಯರ ಪ್ರೌಢಶಾಲೆ, ಕೆ.ಆರ್.ಸಿ.ಇ.ಎಸ್. ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುಗಳಲ್ಲಿ ಮತದಾನ ನಡೆಯಿತು. ಬೆಳಗ್ಗೆ 9ಕ್ಕೆ ಆರಂಭವಾಗಿ ಸಂಜೆ 4ರವರೆಗೆ ತುರುಸಿನಿಂದ ಮತದಾನ ನಡೆಯಿತು.
ಬೆಳಗಾವಿ, ಧಾರವಾಡ, ಕಾರವಾರ ಜಿಲ್ಲೆಗಳಲ್ಲಿನ ಸುಮಾರು 600 ಹಳ್ಳಿಗಳಲ್ಲಿನ 29,135 ಮತದಾರರ ಪೈಕಿ 19,199 ಮತದಾರರು ಮತ ಚಲಾಯಿಸಿದರು. ಕಬ್ಬು ಬೆಳೆಗಾರರ ಅ ವರ್ಗದ 29,983ರಲ್ಲಿ 18,223, ಬ ವರ್ಗದ 108ರಲ್ಲಿ 94, ಕಬ್ಬು ಬೆಳೆಗಾರರಲ್ಲದ ಡ ವರ್ಗ 2,058ರಲ್ಲಿ 882 ಒಟ್ಟು 19,199 ಮತ ಚಲಾವಣೆಗೊಂಡಿದೆ. 84 ಬೂತ್‌ಗಳಲ್ಲಿ 500 ಸಿಬ್ಬಂದಿ ಕಾರ್ಯನಿರ್ವಹಿಸಿದರು. ಡಿವೈಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು.