ಕಳಸ: ಬಾಳೆಹೊಳೆ ಶ್ರೀ ಚನ್ನಕೇಶವ ದೇವಾಲಯದಲ್ಲಿ ಮಂಗಳವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಗಣಹೋಮ, ಧ್ವಜಾರೋಹಣ ಮತ್ತು ದಿಂಡಿ ಉತ್ಸವದೊಂದಿಗೆ ಜಾತ್ರೆ ಆರಂಭಗೊಂಡಿತು. ಮಂಗಳವಾರ ಮಧ್ಯಾಹ್ನ ಶ್ರೀದೇವರ ಸುತ್ತು ಸೇವೆ, ಮಂಗಳಾರತಿ ನೆರವೇರಿದ ಬಳಿಕ ಚನ್ನಕೇಶವ ದೇವರ ವಿಗ್ರಹವನ್ನು ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಿ ಶ್ರೀಮನ್ಮಹಾರಥಾರೋಹಣ ನಡೆಸಲಾಯಿತು. ಭಕ್ತರು ಬೆಳೆದ ಕಾಳುಮೆಣಸು, ಏಲಕ್ಕಿ, ಅಡಕೆ, ಕಾಫಿ ಬೀಜ ಇತ್ಯಾದಿ ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು. ರಾತ್ರಿ ಶ್ರೀಮನ್ಮಹಾರಥೋತ್ಸವ ನಡೆಯಿತು.
ವಿದ್ಯುತ್ ದೀಪಗಳ ಅಲಂಕಾರ, ವಿವಿಧ ಹೂಗಳಿಂದ ದೇವಸ್ಥಾನವನ್ನು ಸಿಂಗರಿಸಲಾಗಿತ್ತು. ಕಳಸ, ಸಂಸೆ, ಹೊರನಾಡು, ತಲಗೋಡು, ಬಸರೀಕಟ್ಟೆ, ಮುನ್ನೂರುಪಾಲ್, ಹಿರೇಬೈಲು, ಮಾವಿನಕೆರೆ, ಕೆ.ಕೆಳಗೂರು ಮುಂತಾದ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಬಂದು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿದರು.
ಜ.15ರಂದು ಕುಂಕುಮೋತ್ಸವ, ಪಲ್ಲಕ್ಕಿ ಉತ್ಸವ, ಅಂಧಾನ ಮತ್ತು ಅವಭೃತ ಸ್ನಾನ, ಗುರುವಾರ ನಡೆಯುವ ಶುದ್ಧ ಸಂಪ್ರೋಕ್ಷಣೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.