ಎನ್.ಆರ್.ಪುರ ತಾಲೂಕು ಮೆಸ್ಕಾಂ ಜನಸಂಪರ್ಕ ಸಭೆ ನಡೆಯಿತು. ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಎಂ.ಎಸ್.ಮಂಜುನಾಥ್, ಸಿದ್ದೇಶ್, ಗೌತಮ್, ಸುರೇಶ್ ಇದ್ದರು.  
ಜಿಲ್ಲೆ

ಬಾಳೆಕೊಪ್ಪ, ಕುದುರೆಗುಂಡಿಯಲ್ಲಿ ಪವರ್ ಸ್ಟೇಷನ್ ನಿರ್ಮಾಣ

ಎನ್.ಆರ್.ಪುರ: ತಾಲೂಕಿನ ಬಾಳೆಕೊಪ್ಪದಲ್ಲಿ 33 ಕೆ.ವಿ.ಪವರ್ ಸ್ಟೇಷನ್ ಮಾಡಲು 2 ಎಕರೆ ಜಾಗ ಗುರುತಿಸಲಾಗಿದೆ ಎಂದು ಮೆಸ್ಕಾಂ ಚಿಕ್ಕಮಗಳೂರು ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಎಂ.ಎಸ್.ಮಂಜುನಾಥ್ ತಿಳಿಸಿದರು.

ಮಂಗಳವಾರ ಮೆಸ್ಕಾಂನಿಂದ ತಾಲೂಕು ವಿದ್ಯುತ್ ಬಳಕೆದಾರರ ಸಂಘದ ಸಹಕಾರದೊಂದಿಗೆ ನಡೆಸಿದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಈಗ ಗುರುತಿಸಿದ ಜಾಗ ಅರಣ್ಯ ಇಲಾಖೆಗೆ ಸೇರಿದೆ. ಈ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಖಾಸಗಿಯವರು ಜಾಗ ನೀಡಲು ಮುಂದೆ ಬಂದರೆ ಖರೀದಿ ಮಾಡಲಾಗುವುದು. ಕುದುರೆಗುಂಡಿಯಲ್ಲೂ 33 ಕೆ.ವಿ. ಪವರ್ ಸ್ಟೇಷನ್ ಮಾಡಲಾಗುವುದು. ಇದರಿಂದ ವಿದ್ಯುತ್ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ಗುಣಮಟ್ಟದ ವಿದ್ಯುತ್ ಸಿಗಲಿದೆ ಎಂದರು.

ಮಲೆನಾಡು ಭಾಗದಲ್ಲಿ ಲೈನ್‌ಮ್ಯಾನ್‌ಗಳ ಕೊರತೆ ಇದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗಕ್ಕೆ ಲೈನ್‌ಮ್ಯಾನ್‌ಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಮೆಸ್ಕಾಂ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದು, ಮಲೆನಾಡಿನ ಭಾಗಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದೇನೆ. ಕಾನೂನು ಚೌಕಟ್ಟಿನಲ್ಲಿ ವಿದ್ಯುತ್ ಬಳಕೆದಾರರಿಗೆ ಅನುಕೂಲ ಮಾಡಲು ಮೆಸ್ಕಾಂ ಸಿದ್ಧವಿದೆ. ಮೆಸ್ಕಾಂನಲ್ಲಿ ಹಣದ ಕೊರತೆ ಇಲ್ಲ. ಹಳೇ ಕಂಬ ತೆಗೆದು ಹೊಸ ಕಂಬಗಳನ್ನು ಹಾಕುತ್ತಿದ್ದೇವೆ. ಈ ವರ್ಷ ಅತಿಯಾದ ಮಳೆ, ಗಾಳಿಯಿಂದ ಮಳೆಗಾಲದಲ್ಲಿ ವಿದ್ಯುತ್ ಅಡಚಣೆಯಾಗಿತ್ತು. ವಿದ್ಯುತ್ ಬಳಕೆದಾರರ ಸಹಕಾರದಿಂದಲೇ ಎಲ್ಲವನ್ನೂ ಸರಿಪಡಿಸಿ ವಿದ್ಯುತ್ ನೀಡಲಾಗಿತ್ತು ಎಂದು ತಿಳಿಸಿದರು.

ಮೆಸ್ಕಾಂ ಕೊಪ್ಪ ಕಾರ್ಯನಿರ್ವಾಹಕ ಇಂಜಿನಿಯರ್ ಸಿದ್ದೇಶ್ ಮಾತನಾಡಿ, ಮಲೆನಾಡು ಭಾಗದಲ್ಲಿ ಶೇ.90 ವಿದ್ಯುತ್ ಲೈನ್ ಅರಣ್ಯದಲ್ಲೇ ಹಾದುಹೋಗಿದೆ. ಈಗ ಹೊಸದಾಗಿ ಮಾಡುವ ಎಲ್ಲ ಲೈನ್‌ಗಳನ್ನು ರಸ್ತೆ ಬದಿಯಲ್ಲೇ ಹಾಕುತ್ತಿದ್ದೇವೆ. ಮುತ್ತಿನಕೊಪ್ಪ, ಎನ್.ಆರ್.ಪುರ ಹಾಗೂ ಕೊಪ್ಪ ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಕಂಬಗಳು ದಾಸ್ತಾನು ಇದೆೆ. ಕಳೆದ ವಷರ್ ವಿದ್ಯುತ್ ಕಂಬ ಸಾಗಣೆಗೆ ಇಲಾಖೆಯಲ್ಲಿ ವಾಹನ ಇರಲಿಲ್ಲ. ವಿದ್ಯುತ್ ಬಳಕೆದಾರರ ಸಹಕಾರದಿಂದಲೇ ಕಂಬಗಳನ್ನು ಸಾಗಿಸಲಾಗಿತ್ತು. ಈ ವರ್ಷ ಮೆಸ್ಕಾಂಗೆ ಹೊಸದಾಗಿ ಲಾರಿಗಳು ಬಂದಿವೆ ಎಂದರು.

ಮೆಸ್ಕಾಂ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಸಮಸ್ಯೆಗಳನ್ನು ಹೇಳಿಕೊಂಡರು. ತಾಲೂಕು ಮೆಸ್ಕಾಂ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಮಾತನಾಡಿ, ಮೆಸ್ಕಾಂ ನಿಯಮದಂತೆ ನೆಲಮಟ್ಟದಿಂದ 13 ಅಡಿ ಎತ್ತರ ಲೈನ್ ಇರಬೇಕು. ಆದರೆ ಕೆಲವು ಲೈನ್‌ಗಳು ಜೋತುಬಿದ್ದಿವೆ. ಟಿಸಿಗಳಿಗೆ ಸಮಯಕ್ಕೆ ಸರಿಯಾಗಿ ಆಯಿಲ್ ಚೇಂಜ್ ಮಾಡುತ್ತಿಲ್ಲ. ಲೈನ್ ಕ್ಲಿಯರೆನ್ಸ್ ಸರಿಯಾಗಿ ಮಾಡುತ್ತಿಲ್ಲ. ಕೆಪಿಸಿಟಿಎಲ್ ನಿಯಮದಂತೆ 14 ಕಿ.ಮೀ.ಗೆ ಒಂದರಂತೆ ಪವರ್ ಸ್ಟೇಷನ್ ಇರಬೇಕಾಗಿತ್ತು. ಇಲ್ಲದಿದ್ದರೆ ವೋಲ್ಟೇಜ್ ಕಡಿಮೆಯಾಗುತ್ತದೆ ಎಂದರು. ತಾಲೂಕು ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಬಿ.ಕೆ.ಜಾನಕೀರಾಂ ಮಾತನಾಡಿ, ಟಿಸಿ ಹಾಳಾದರೆ ಕಾಲಮಿತಿಯಲ್ಲಿ ಹೊಸ ಟಿಸಿ ಹಾಕಿಸಿಕೊಡಬೇಕು. ಈಗ ವಿಳಂಬವಾಗುತ್ತಿದೆ. ಕೆಲವು ಟಿಸಿಗಳಿಗೆ ಲೋಡ್ ಜಾಸ್ತಿಯಾಗುತ್ತಿದೆ. ಎಲ್ಲ ವಿದ್ಯುತ್ ಲೈನ್‌ಗಳ ಅಕ್ಕಪಕ್ಕದ ಗಿಡ ಗಂಟಿಗಳನ್ನು ತೆಗೆದು ಕ್ಲಿಯರೆನ್ಸ್ ಮಾಡಿಸಿಕೊಡಬೇಕು. ಜೋತುಬಿದ್ದ ಲೈನ್‌ಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಮುಖಂಡ ಮಾಳೂರುದಿಣ್ಣೆ ವಿನಾಯಕ ಇತರ ಗ್ರಾಹಕರು ಮೆಸ್ಕಾಂಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನರಾಗಿದ್ದರಿಂದ ಸಭೆಯಲ್ಲಿ 2 ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರೈತ ಮುಖಂಡ ಪಿ.ಕೆ.ಬಸವರಾಜಪ್ಪ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡಿದರು. ರಾಜ್ಯಕ್ಕೆ ಐಟಿ, ಬಿಟಿ ಕಂಪನಿಗಳನ್ನು ಬರಮಾಡಿಕೊಂಡರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಿದ್ದರು. ವಿಕಾಸ ಸೌಧ ಕಟ್ಟಿಸಿದ್ದರು. ಅವರು ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ ಹೆಸರು ಗಳಿಸಿದ್ದರು. ಅವರು ಬಿಟ್ಟುಹೋದ ಹೆಜ್ಜೆ ಗುರುತುಗಳು ಮುಂದಿನ ರಾಜಕಾರಣಿಗಳಿಗೆ ದಾರಿ ಎಂದರು.