ಬಾಗಲಕೋಟೆ ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಸಾಂಸ್ಕೃತಿಕ ಚಟುವಟಿಕೆ ವಿಭಾಗ ಈಚೆಗೆ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿದರು. ಸಂಯೋಜಕ ಡಾ.ಎಸ್.ಎಸ್.ಹಂಗರಗಿ ಇದ್ದರು.  
ಜಿಲ್ಲೆ

ಬಾಳಿಗೆ ಬೆಳಕಾಗುವ ಗುರುವಿನ ಸ್ಮರಣೆ ಮಾಡಿ

ಬಾಗಲಕೋಟೆ: ಜ್ಞಾನವೆಂಬ ದೀಪದಿಂದ ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಬಾಳಿಗೆ ಬೆಳಕಾಗುವ ಗುರುವಿನ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.

ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಸಾಂಸ್ಕೃತಿಕ ಚಟುವಟಿಕೆ ವಿಭಾಗ ಈಚೆಗೆ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಗುರುವಿನ ಪಾತ್ರ ದೊಡ್ಡದು. ಅವರ ಆ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸಿ ವಂದನೆಯನ್ನು ಸಮರ್ಪಿಸುವುದಕ್ಕಾಗಿ ಗುರುಪೂರ್ಣಿಮೆ ಆಚರಿಸಲಾಗುತ್ತಿದೆ. ಗುರುವಿನ ನಡೆ-ನುಡಿ,ಆಚಾರ-ವಿಚಾರ ವ್ಯಕ್ತಿಗಳ ಮೇಲೆ ಪೂರಕ ಪ್ರಭಾವ ಬೀರುತ್ತದೆ. ತನ್ನ ಜ್ಞಾನ ತೇಜಸ್ಸಿನಿಂದ ಶಿಷ್ಯನ ಅಜ್ಞಾನ ಕಳೆದು ಒಳ್ಳೆಯ ದಾರಿ ತೋರುವವನೇ ಗುರು ಆಗಿದ್ದಾನೆ ಎಂದರು.

ಉದಾತ್ತವಾದ ಮೌಲ್ಯಗಳನ್ನು ನೀಡುವುದರ ಮೂಲಕ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿರುವ ಪ್ರಕೃತಿಯೂ ಗುರುವೇ ಸರಿ. ಅದು ಜ್ಞಾನದ ಆಗರವೂ ಹೌದು. ಅದನ್ನು ಯುವ ಸಮುದಾಯ ಅರಿಯಬೇಕು. ಜೀವನದಲ್ಲಿ ಮಹತ್ವದ ತಿರುವು ನೀಡಿ, ಬಾಳಲ್ಲಿ ಬೆಳಕು ಮೂಡಿಸಿ ಅರಿವಿನ ದಾರಿ ತೋರುವ ಗುರುವಿಗೆ ನಮಿಸುವುದು ಎಲ್ಲರ ಕರ್ತವ್ಯ ಎಂದರು.

ಮಹಾಭಾರತ ಬರೆದ ವೇದವ್ಯಾಸರ ಜಯಂತಿಯ ಕಾರಣಕ್ಕೆ ಗುರುಪೂರ್ಣಿಮೆಗೆ ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತಿದೆ. ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಯನ್ನು,ನಾಡಿನ ಜ್ಞಾನ ಸಂಪತ್ತಾಗಿರುವ ಅವರ ಹಲವು ರಚನೆಗಳನ್ನು ಯುವಕರು ಅಧ್ಯಯನ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಇಂತಹ ದಿನಾಚರಣೆಗಳು ಸಹಕಾರಿಯಾಗಲಿವೆ ಎಂದರು.

ಉಪನ್ಯಾಸಕಿ ಶ್ವೇತಾ ಕುಲಕರ್ಣಿ ಪ್ರಾರ್ಥಿಸಿದರು. ಸಂಯೋಜಕ ಡಾ.ಎಸ್.ಎಸ್.ಹಂಗರಗಿ ಸ್ವಾಗತಿಸಿದರು. ಎಚ್.ಎಸ್.ಗಿಡಗಂಟಿ ವಂದಿಸಿದರು. ಉಪನ್ಯಾಸಕಿ ಕೀರ್ತಿ ದಾಸರ ನಿರೂಪಿಸಿದರು.

========