ಗುಂಡ್ಲುಪೇಟೆ ನ್ಯಾಯಾಲಯದ ಆವರಣದಲ್ಲಿ ಸುರಕ್ಷಿತ ಬಾಲ್ಯಯಾತ್ರೆ ರಥಕ್ಕೆ ನ್ಯಾಯಾಧೀಶ ಬಸವರಾಜ ತಳವಾರ್ ಚಾಲನೆ ನೀಡಿದರು. ಜಿ.ಜೆ.ಶಿವಕುಮಾರ್, ಕಾಂತಮ್ಮ, ಎಸ್.ಸಿ.ಶಿವಮೂರ್ತಿ, ಟಿ.ಎಸ್.ವೆಂಕಟೇಶ್ ಇದ್ದರು. 
ಜಿಲ್ಲೆ

ಬಾಲ್ಯವಿವಾಹದಿಂದ ಬದುಕುವ ಹಕ್ಕು ಮೊಟಕು

ಗುಂಡ್ಲುಪೇಟೆ: ಪಾಲಕರು ಹೊಣೆಗಾರಿಕೆ ಕಳೆದುಕೊಳ್ಳುವ ಸಲುವಾಗಿ ಮಕ್ಕಳಿಗೆ ಬಾಲ್ಯವಿವಾಹ ಮಾಡುವ ಮೂಲಕ ಬದುಕುವ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ್ ಬೇಸರ ವ್ಯಕ್ತಪಡಿಸಿದರು.


ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುರಕ್ಷಿತ ಬಾಲ್ಯಯಾತ್ರೆ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲ್ಯವಿವಾಹವಾದ ಮಕ್ಕಳು ದೈಹಿಕವಾಗಿ ಪಕ್ವವಾಗದ ಪರಿಣಾಮ ಹೆರಿಗೆ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಪ್ಪಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ.

ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದ್ದರೂ ಅಲ್ಲಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಬೇಕು ಎಂದು ಸಲಹೆ ನೀಡಿದರು.


ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜಿ.ಜೆ.ಶಿವಕುಮಾರ್, ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಕಾಂತಮ್ಮ, ಬಿಇಒ ಎಸ್.ಸಿ.ಶಿವಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್ ಇತರರು ಇದ್ದರು.