ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಒಂದೇ ಒಂದು ಬಾಲ್ಯವಿವಾಹ ನಡೆಯದಂತೆ ಜಾಗ್ರತೆ ವಹಿಸಲು ಸೂಚಿಸಿರುವ ಜಿಲ್ಲಾಧಿಕಾರಿ ಆರ್.ಲತಾ, ಬಾಲ್ಯವಿವಾಹ ಮಾಡಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಕೈಗೊಂಡಿದ್ದ ಬಾಲ್ಯವಿವಾಹ ತಡೆಯುವ ಜಿಲ್ಲಾಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಹಾಗೂ ಮಹಿಳಾ ದೌರ್ಜನ್ಯ ತಡೆಗಟ್ಟುವ ಜಿಲ್ಲಾಮಟ್ಟದ ಸಮಿತಿ ಸಭೆ ನಡೆಸಿ, ನಿಯಮಗಳನ್ನು ಉಲ್ಲಂಘಿಸಿ ಬಾಲ್ಯ ವಿವಾಹ ಮಾಡಿದರೆ ಸಂಬಂಧಪಟ್ಟ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಾಕೀತು ಮಾಡಿದರು.
ಬಾಲ್ಯವಿವಾಹವು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಪ್ರಾಪ್ತ ಹೆಣ್ಣುಮಗುವಿನ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯಲ್ಲಿ ಹಲವು ಸಮಸ್ಯೆಗಳು ಬಾಧಿಸಲಿದ್ದು ಇದಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬಾಲ್ಯವಿವಾಹ ತಡೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ರಚಿಸಲಾಗಿರುವ ತಂಡ ತಳಮಟ್ಟದಲ್ಲಿ ಸೂಕ್ಷ್ಮವಾಗಿ ಮಾಹಿತಿ ಸಂಗ್ರಹಿಸಿ ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಬೇಕು. ಇದಕ್ಕಾಗಿ ವ್ಯಾಟ್ಸಾಫ್ ಗ್ರೂಪ್ ರಚಿಸಿಕೊಂಡು, ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸುವಂತೆ ಡಿಸಿ ಸೂಚಿಸಿದರು.
ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿಗೆ ವಿವಾಹ ಮಾಡುವ ಪರಿಸ್ಥಿತಿಯನ್ನು ಹೋಗಲಾಡಿಸಲು ಜಾಗೃತಿ ಮೂಡಿಸಬೇಕು, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳು ಸ್ಥಳೀಯ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಬಾಲ್ಯ ವಿವಾಹದಿಂದಾಗುವ ಸಮಸ್ಯೆಗಳ ಬಗ್ಗೆ ಕರಪತ್ರ, ಭಿತ್ತಿಪತ್ರಗಳ ಮೂಲಕ ಜನರಿಗೆ ತಿಳಿಸಬೇಕಿದ್ದು, ಈ ಭಾಗದಲ್ಲಿ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಖಾತ್ರಿ ಪಡಿಸಲು ಸೂಚನೆ : ಮುದ್ರಣ ಮತ್ತು ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ವಧು-ವರರ ವಯಸ್ಸನ್ನು ದೃಢೀಕರಿಸಿಕೊಂಡ ಬಳಿಕ ಆಹ್ವಾನ ಪತ್ರಿಕೆಗಳ ಮುದ್ರಣ ಮತ್ತು ವೈಯಕ್ತಿಕ ಕಡತಗಳ ನಿರ್ವಹಣೆ, ಕಲ್ಯಾಣ ಮಂಟಪ, ಚರ್ಚ್, ಮಸೀದಿ ಸೇರಿ ಮದುವೆ ನಡೆಯುವ ಸ್ಥಳಗಳಲ್ಲಿ ಕೈಗೊಳ್ಳುತ್ತಿರುವ ಮದುವೆ ಬಾಲ್ಯವಿವಾಹವಲ್ಲ ಎನ್ನುವುದನ್ನು ಮೊದಲೇ ಖಾತ್ರಿಪಡಿಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪದ್ಮರಾಜ್ ಸಭೆಗೆ ಮಾಹಿತಿ ನೀಡಿದರು.
ಸಹಾಯವಾಣಿ ಮತ್ತಷ್ಟು ಚುರುಕು : ಬಾಲ್ಯ ವಿವಾಹ ತಡೆ ಸೇರಿ ಮಕ್ಕಳ ರಕ್ಷಣೆ ಸಂಬಂಧಿಸಿದಂತೆ 1098 ಸಹಾಯವಾಣಿ ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ದೂರು ನೀಡಲು ಇರುವ 112 ಸಹಾಯವಾಣಿ ಕಾರ್ಯ ನಿರ್ವಹಣೆಯನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಲಾಯಿತು. ಅಂಗನವಾಡಿ, ಗ್ರಾಪಂ, ನ್ಯಾಯಬೆಲೆ ಅಂಗಡಿ, ಶಾಲಾ ಕಾಲೇಜು, ಪೊಲೀಸ್ ಠಾಣೆ ಸೇರಿ ನಾನಾ ಕಚೇರಿಗಳ ಆವರಣದಲ್ಲಿ ಸಹಾಯವಾಣಿ ಸಂಖ್ಯೆಯ ಜತೆಗೆ ಸಹಾಯವಾಣಿಯ ಉದ್ದೇಶದ ಅಂಶಗಳನ್ನೊಳಗೊಂಡ ಮಾಹಿತಿ ಫಲಕಗಳ ಅಳವಡಿಕೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು, ಶಿಕ್ಷಣ ಇಲಾಖೆ, ಪೊಲೀಸ್ ಅಧಿಕಾರಿಗಳು ಈ ದಿಸೆಯಲ್ಲಿ ವಿಶೇಷ ಕಾಳಜಿ ವಹಿಸಲು ಸೂಚಿಸಲಾಯಿತು. ಮಕ್ಕಳಿಗೆ ಶೋಷಣೆ, ಕಿರುಕುಳ ಉಂಟಾದಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಅದೇ ರೀತಿ ಹೆಣ್ಣುಮಕ್ಕಳು ದೌರ್ಜನ್ಯಕ್ಕೊಳಗಾದಾಗ ಸಮಸ್ಯೆ ಹೇಳಿಕೊಂಡು ಬಗೆಹರಿಸಿಕೊಳ್ಳಬಹುದು ಎಂದು ಡಿಸಿ ತಿಳಿಸಿದರು.
41 ಬಾಲ್ಯ ವಿವಾಹ ದೂರು : ಬಾಲ್ಯವಿವಾಹಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಈವರೆಗೂ 41 ದೂರುಗಳು ದಾಖಲಾಗಿವೆ. ಈ ಪೈಕಿ 39 ಪ್ರಕರಣಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ, ಆದರೆ ಎರಡು ಪ್ರಕರಣಗಳಲ್ಲಿ ವಿವಾಹ ನಡೆದಿದ್ದು, ಕಾನೂನು ಉಲ್ಲಂಘಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮಕ್ಕಳನ್ನು ವಶಕ್ಕೆ ಪಡೆಯಲಾಗಿದೆ. 138 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 106 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಪದ್ಮರಾಜ್ ಮಾಹಿತಿ ನೀಡಿದರು.
ಸಾಂತ್ವನ ಕೇಂದ್ರಗಳ ಪರಿಶೀಲನೆ : ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರಗಳ ಕಾರ್ಯ ವೈಖರಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮಹಿಳೆಯರ ಸಂಕಷ್ಟಕ್ಕೆ ನೆರವಾಗಿ ಪರಿಹಾರ ಒದಗಿಸಲು ಸ್ಥಾಪಿಸಲಾಗಿರುವ ಸಾಂತ್ವನ ಕೇಂದ್ರಗಳ ಚುರುಕಿನಿಂದ ಕಾರ್ಯನಿರ್ವಹಣೆ, ಗ್ರಾಮಮಟ್ಟದಲ್ಲಿ ರಚಿಸಿಸಲಾಗಿರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿಗಳ ಜವಾಬ್ದಾರಿ, ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗುವ ಸಾಧ್ಯತೆ, ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ತಯಾರಿಸುವಿಕೆ ಸೇರಿ ಹಲವು ವಿಚಾರಗಳು ಚರ್ಚೆಗೊಳಪಟ್ಟವು.