ಚಾಮರಾಜನಗರ: ಪಾಲಕರು ಮಕ್ಕಳಿಗೆ ಬಾಲ್ಯ ವಿವಾಹ ಮಾಡದೆ ಉತ್ತಮವಾದ ಶಿಕ್ಷಣವನ್ನು ಕೊಡಿಸಬೇಕು. ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಸಲಹೆ ನೀಡಿದರು.
ತಾಲೂಕಿನ ನಾಗವಳ್ಳಿ ಗ್ರಾಮದ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ನಿಸರ್ಗ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನಾಗರೀಕ ಹಕ್ಕು ಸಂರಕ್ಷಣಾ ಕಾಯ್ದೆ-1955 ಮತ್ತು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು (ದೌರ್ಜನ್ಯ ತಡೆ) ಅಧಿನಿಯಮ-1989 ಕಾನೂನು ಅರಿವು-ನೆರವು ಮತ್ತು ಆರೋಗ್ಯ-ನೈರ್ಮಲ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಬಾಲ್ಯ ವಿವಾಹ ಮಾಡಿದರೆ ಅವರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುತ್ತಾರೆ. ಹಾಗಾಗಿ ಮಕ್ಕಳಿಗೆ ಮದುವೆ ವಯಸ್ಸು ಬರುವವರೆಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂದು ಪೋಷಕರಿಗೆ ತಿಳಿಹೇಳಿದರು. ಮಕ್ಕಳ ಕಳ್ಳ ಸಾಗಾಣಿ, ಬಾಲ್ಯ ವಿವಾಹ ಭಿಕ್ಷಾಟನೆಗೆ, ದುಡಿಮೆ ಮಾಡಿಸುವುದು ಇವೆಲ್ಲಾ ಅಪರಾಧವಾಗಿದೆ ಹಾಗೂ ಮಕ್ಕಳ ಹಕ್ಕುಗಳಿಗೆ ಚ್ಯುತಿ ಮಾಡುವ ಕೆಲಸವಾಗಿದೆ. ಮನುಷ್ಯನಿಗೆ ಶಿಕ್ಷಣ ಬಹಳ ಮುಖ್ಯವಾಗಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಚೆನ್ನಾಗಿ ಓದಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಆಗ ಅವರ ಬುದ್ಧಿಶಕ್ತಿಯ ಮೇಲೆ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಜೀವಿಸುತ್ತಾರೆ ಎಂದರು.
ಜಾತಿ ಹೆಸರಿನಲ್ಲಿ ತಾರತಮ್ಯ ಮಾಡುವುದು, ದೌರ್ಜನ್ಯ ಮಾಡುವುದು, ಪ.ಚಾತಿ ಪ.ಪಂಗಡದ ಹೆಣ್ಣು ಮಕ್ಕಳ ಮೇಲೆ ಹಣದ ಆಸೆ ತೋರಿಸಿ ದೌರ್ಜನ್ಯ ಎಸಗುವುದು, ಪ.ಚಾತಿ ಪ.ಪಂಗಡದ ಜಮೀನುಗಳನ್ನು ಕಾನೂನುಬಾಹಿರವಾಗಿ ಪಡೆಯುವುದು, ಜಾತಿ ನಿಂದನೆ ಮಾಡುವುದು ಅಪರಾಧವಾಗುತ್ತದೆ ಇವುಗಳನ್ನೆಲ್ಲ ತಡೆಯಲು 1989ರಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ದೌರ್ಜನ್ಯ ತಡೆ ಕಾಯ್ದೆಯು ಜಾರಿಗೆ ಬಂದಿತ್ತು ಎಂದರು.
ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾಗಿದೆ. ಆರೋಗ್ಯಕ್ಕೆ ಪೂರಕವಾದ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಮದ್ಯಪಾನ, ಧೂಮಪಾನಗಳಂತಹ ದುಷ್ಟಗಳನ್ನು ಬಿಟ್ಟು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಆಗಮಾತ್ರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ಮನೆಯ ಸುತ್ತಮುತ್ತ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸ್ವಚ್ಛತೆ ಇಲ್ಲದಿದ್ದರೆ ಅಲ್ಲಲ್ಲಿ ದುರ್ವಾಸನೆ ಬೀರಿ ಸೊಳ್ಳೆ ಹೆಚ್ಚಾಗಿ ಕಾಲರಾ, ಮಲೇರಿಯಾ, ಡೆಂಗ್ಯೂ ಗಳಂತಹ ರೋಗಗಳು ಹರಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇವುಗಳನ್ನೆಲ್ಲ ತಡೆಯಬೇಕಾದರೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮನೆಯ ಅಕ್ಕಪಕ್ಕ ಗಿಡಗಳನ್ನು ನೆಟ್ಟು ಘೋಷಣೆ ಮಾಡಬೇಕು. ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಅಸ್ಗರ್ ಪಾಷ, ವಕೀಲ ಬಿ.ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೇಘಾ, ನಿಸರ್ಗ ಟ್ರಸ್ಟ್ ಸಿಇಒ ನಾಗರಾಜು ಪಿಡಿಒ ಎನ್.ರವಿಕುಮಾರ್, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಕಾನೂನಿನ ಅರಿವು ಮೂಡಿಸುವುದರಿಂದ ಪ್ರತಿಯೊಬ್ಬರೂ ಸಮಾಜದಲ್ಲಿ ಜೀವಿಸಲು ಸಮಾನರು ಎಂಬುದು ತಿಳಿಯುತ್ತದೆ. ಪ್ರಸ್ತುತದಲ್ಲಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಕಾನೂನಿನ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಜೀವಿಸಬೇಕು. ನಂಜಯ್ಯ. ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ, ಚಾಮರಾಜನಗರ