ಬಾಗಲಕೋಟೆ: ಅನಿಷ್ಟ ಪದ್ದತಿಯಲ್ಲಿ ಒಂದಾದ ಬಾಲ್ಯವಿವಾಹ ತಡೆಗಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಹೇಳಿದರು.
ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವ ಮೂಲ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಮಾತನಾಡಿದ ಅವರು ಮನೆಯಲ್ಲಿದ್ದ ವಯೋವೃದ್ದರು ತಮಗೆ ಇಳಿಯ ವಯಸ್ಸಾಗಿದ್ದರಿಂದ ಮೊಮ್ಮಕ್ಕಳ ಮದುವೆಯನ್ನು ನೋಡಬೇಕೆಂಬ ಹಂಬಲದಿAದ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಸಿ ತಾವು ನಿಧನರಾಗುವದಲ್ಲದೇ ಮುಗ್ದ ಮಕ್ಕಳನ್ನು ಹಾಳು ಮಾಡಿದಂತಾಗುತ್ತದೆ. ಹೆಣ್ಣು ಮಕ್ಕಳಿಗೆ ೧೮ ವರ್ಷ, ಗಂಡು ಮಕ್ಕಳಿಗೆ ೨೧ ವರ್ಷಗಳ ನಂತರವೇ ಮದುವೆ ಮಾಡಬೇಕು ಎಂದರು.
ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವದರಿಂದ ಆ ವಯಸ್ಸಿನಲ್ಲಿ ಶಾರೀರಿಕ, ಮಾನಸಿಕವಾಗಿ ಕುಗ್ಗಿ ಜೀವನ ಪರ್ಯಂತ ನರಳುವ ಸ್ಥಿತಿ ಉಂಟಾಗುತ್ತದೆ. ಇಂದಿನ ಆಹಾರ ಹಿಂದಿನ ಪದ್ದತಿಯಂತಿಲ್ಲ. ಪೌಷ್ಠಿಕ ಆಹಾರ ಕೊರತೆಯಿಂದ ಸದೃಢ ಇಲ್ಲದೇ ಇರುವದರಿಂದಾಗಿ, ಮಾನಸಿಕ ಒತ್ತಡಕ್ಕೆ ಸಿಲುಕಿ ಸಂಬAಧಗಳ ಕೊಂಡಿಯನ್ನು ಕಳಚಿಕೊಂಡು ಬೇರೊಬ್ಬರ ಮನೆಯಲ್ಲಿ ಹೊಂದಿಕೊಳ್ಳಬೇಕಾದರೆ ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಗೆ ಮಕ್ಕಳನ್ನು ನೂಕದೇ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಮದುವೆ ವಯಸ್ಸಿಗೆ ಬಂದಾಗಲೇ ಮದುವೆ ಮಾಡಬೇಕು. ಒಂದು ವೇಳೆ ಬಾಲ್ಯವಿವಾಹ ಮಾಡಿಸಿದಲ್ಲಿ ತಪ್ಪಿತಸ್ಥರಿಗೆ ೨ ವರ್ಷ ಶಿಕ್ಷೆಯ ಜೊತೆಗೆ ೧ ಲಕ್ಷ ದಂಡ ಸಹ ಕಟ್ಟಬೇಕಾಗುತ್ತದೆ ಎಂದರು.
ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗು ಆಗಿದ್ದು, ಸರಕಾರದ ಆದೇಶದಂತೆ ಕಾನೂನು ಕ್ರಮ, ಶಿಕ್ಷೆ, ದಂಡ ಅನುಭವಿಸುವ ಮೊದಲು ಜನರು ವಿಚಾರವಂತರಾಗಿ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಿ ಮಕ್ಕಳಿಗೆ ಶಿಕ್ಷಣವಂತರನ್ನಾಗಿ ಮಾಡುವ ಜೊತೆಗೆ ಆರೋಗ್ಯವಂತ ಜೀವನ ನಡೆಸುವಂತಾಗಬೇಕು. ಅಲ್ಲದೇ ಮಕ್ಕಳ ಮೇಲೆ ದೌರ್ಜನ್ಯವಾದಲ್ಲಿ ಸಂಬAಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು. ಅಂದಾಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಪಾಲಕರು ಪೋಷಕರು ಈ ಅನಿಷ್ಠ ಪದ್ದತಿಯನ್ನು ತೊಡೆದು ಹಾಕಲು ಸಹಕಾರ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಂಗಪ್ಪ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಅಮರೇಶ ಎಚ್, ಶಿಶು ಅಭಿವೃಧ್ದಿ ಯೋಜನಾಧಿಕಾರಿ ದಸ್ತಗರಿಸಾಬ ಮುಲ್ಲಾ, ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿ ರತ್ಮಾ ಮೂಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ವೀಣಾ ಎಂ.ವಿ, ಪ್ರೌಢಶಾಲಾ ಮುಖ್ಯೋಪಾದ್ಯಾಯ ಶಶಿಕಾಂತ ಹುನಗುಂದ ಸೇರಿದಂತೆ ಇತರರು ಪಾಲ್ಗೊಂಡಿದ್ದರು.