ಕೂಡ್ಲಿಗಿ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ಕುಂದು ಕೊರತೆಗಳು ಸಭೆಯಲ್ಲಿ ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಮಾತನಾಡಿದರು. ಶಿಕ್ಷಣ ಇಲಾಖೆ ಇಸಿಒ ನಾಗರಾಜ, ಆಶಾ ಮೆಂಟರ್ ಲತಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸವಿತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಇದ್ದರು. 
ಜಿಲ್ಲೆ

ಬಾಲ್ಯವಿವಾಹ ತಡೆಗಟ್ಟಲು ಎಲ್ಲರೂ ಸಹಕರಿಸಲಿ

ಕೂಡ್ಲಿಗಿ: ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ತೃಪ್ತಿ ತಂದಿದೆ. ಇನ್ನೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರು ಉತ್ತಮ ಸೇವೆ ಮಾಡುತ್ತಿದ್ದು, ಪ್ರತಿ ಗ್ರಾಮ ಮಟ್ಟದಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಹಿಂದುಳಿದ ತಾಲೂಕಿನಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದರಿಂದ ಬಾಲಕಿಯರು ಪ್ರೌಢಾವಸ್ಥೆ ತಲುಪುವ ಮೊದಲೇ ಗರ್ಭಿಣಿಯಾಗುತ್ತಿದ್ದಾರೆ. ಇದರಿಂದ ಜನಿಸುವ ಮಗು ಹಾಗೂ ತಾಯಿ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಎಲ್ಲರೂ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಬೇಕು. ಜತೆಗೆ ಮಗು ಜನಿಸಿದ ನಂತರ ಗರ್ಭಿಣಿಯಾಗಲು ಮೂರು ವರ್ಷದ ಅಂತ ಕಾಪಾಡಲು ತಾಯಂದಿರಿಗೆ ತಿಳಿಸುವಂತೆ ಸೂಚಿಸಿದರು.

ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಮಾತ್ರೆ ಹಾಗೂ ಚುಚ್ಚುಮದ್ದು ಪಡೆಯದೆ ಮೂಢ ನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸಿ ಐರನ್ ಹಾಗೂ ಫೋಲಿಕ್ ಮಾತ್ರೆಗಳನ್ನು ಸೇವಿಸಿದರೆ ಆರೋಗ್ಯವಂತ ಮಗು ಜನಿಸುತ್ತದೆ ಎಂದು ಗರ್ಭಿಣಿಯರಿಗೆ ಮನವರಿಕೆ ಮಾಡಿ. ಬಡವರು ಪೌಷ್ಟಿಕ ಆಹಾರ ಸೇವಿಸದೆ ರಕ್ತ ಹೀನತೆಗೆ ಬಲಿಯಾಗುತ್ತಿದ್ದಾರೆ. ಪೌಷ್ಟಿಕ ಆಹಾರ ಸೇವಿಸುವಂತೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿಯರಿಗೆ ಪ್ರತ್ಯೇಕ ಕೊಠಡಿ ಹಾಗೂ ಅಗತ್ಯ ಸೌಲಭ್ಯ ಒದಗಿಸುವಂತೆ ಆಶಾ ಕಾರ್ಯಕರ್ತೆಯರು ಮನವಿ ಮಾಡಿದರು. ಟಿಎಚ್‌ಒ ಎಸ್.ಪಿ.ಪ್ರದೀಪ್ ಕುಮಾರ್ ಪ್ರತಿಕ್ರಿಯಿಸಿ, ಈ ಕುರಿತು ಆಸ್ಪತ್ರೆಗಳ ವೈದ್ಯರಿಗೆ ತಿಳಿಸಿ ಅಗತ್ಯವಿದ್ದಲ್ಲಿ ಪ್ರತ್ಯೇಕ ಕೊಠಡಿ ನೀಡಲು ಅಥವಾ ಶುಶ್ರೂಷಕಿಯರ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗುವುದು. ಆಶಾ ಕಾರ್ಯಕರ್ತೆಯರು ಯಾವುದೇ ಸಮಸ್ಯೆ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಂಡು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಿಕ್ಷಣ ಇಲಾಖೆ ಇಸಿಒ ನಾಗರಾಜ, ಆಶಾ ಮೆಂಟರ್ ಲತಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸವಿತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಆಶಾ ಕಾರ್ಯಕರ್ತೆಯರು ಇದ್ದರು.