ಹುಮನಾಬಾದ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಮಾತನಾಡಿದರು. ಡಾ.ಸೋಮನಾಥ ಯಾಳವಾರ, ಕಂಟೆಪ್ಪ ದಾನಾ ಇತರರಿದ್ದರು. 
ಜಿಲ್ಲೆ

ಬಾಲ್ಯದಲ್ಲಿಯೇ ಮಕ್ಕಳಿಗೆ ವಚನ ಕಲಿಸಿ

ಹುಮನಾಬಾದ್: ಬಸವಾದಿ ಶರಣರ ತತ್ವ ಆದರ್ಶಗಳು ಅತ್ಯಾಮೂಲ್ಯವಾಗಿದ್ದು, ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ವಚನ ಪಠಣ ಸೇರಿ ಸಂಸ್ಕಾರ, ಪರಂಪರೆ, ಸಂಸ್ಕೃತಿ ಬಗ್ಗೆ ತಿಳಿವಳಿಕೆ ಮೂಡಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬಸವ ಸೇವಾ ಪ್ರತಿಷ್ಠಾನ, ಶರಣ ಸಾಹಿತ್ಯ ಪರಿಷತ್, ಶ್ರೀ ಬಸವೇಶ್ವರ ಮಹಿಳಾ ಸೇವಾ ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಎಲ್ಲ ಶರಣರು ಸತ್ಯ, ನಿಷ್ಠೆ, ಕಾಯಕದೊಂದಿಗೆ ನಡೆದುಕೊಂಡು ವಚನಗಳ ಮೂಲಕ ನೀಡಿರುವ ಸಂದೇಶ ಪ್ರತಿಯೊಬ್ಬ ಮಾನವ ಜೀವಕ್ಕೆ ಆದರ್ಶವಾಗಿವೆ. ಹಣ ಅಂತಸ್ತು ಎಷ್ಟೇ ಇದ್ದರೂ ಸಹ ಶ್ರೀಮಂತನಲ್ಲ. ಯಾರು ನೆಮ್ಮದಿಯ ಜೀವನ ನಡೆಸುತ್ತಾರೂ ಅವರೇ ನಿಜವಾದ ಶ್ರೀಮಂತರು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಅವರಲ್ಲಿ ಶರಣರ, ಸಂತರ ಮಹಾಪುರಷರ ವಿಚಾರಧಾರೆ ಒಡಮೂಡಿಸಿ ಉತ್ತಮ ಸಂಸ್ಕಾರಯುತರಾಗಿ ನಿರ್ಮಿಸಬೇಕೆಂದು ಹೇಳಿದರು.

ಬಸವಕಲ್ಯಾಣದ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಒದಗಿಸಿದ್ದು ಒಂದು ವರ್ಷದಲ್ಲಿ ಕಾರ್ಯ ಪೂರ್ಣಗೊಂಡ ನಂತರ ಜಗತ್ತಿನ ಜನ ಕಲ್ಯಾಣದ ಕಡೆಗೆ ಹರಿದು ಬರಲಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಅಕ್ಕಮಹಾದೇವಿ ಜೀವನ, ಅವರು ನೀಡಿರುವ ಉಪದೇಶ ಕುರಿತು ಉಪನ್ಯಾಸ ನೀಡಿದರು. ಕಲಾವಿದ ಗುರು ಮುಗುಳಿ ವಚನ ಗಾಯನ ಮಾಡಿದರು.

ಪ್ರಮುಖರಾದ ಕಂಟೆಪ್ಪ ದಾನಾ, ಬಸವರಾಜ ರುದ್ರವಾಡಿ, ಮಡಿವಾಳಯ್ಯ ಸ್ವಾಮಿ, ಚನ್ನಬಸಪ್ಪ ವಡ್ಡನಕೇರಾ, ಶಂಕರ ನಂದಿ, ದಯಾನಂದ ನಂದಿ, ಶರಣಬಸವಪ್ಪ ಪಾರಾ, ನಾಗೇಂದ್ರಪ್ಪ ಧುಮ್ಮನಸೂರೆ, ಪಂಢರಿನಾಥ ಹುಗ್ಗಿ, ಕರುಣ ಸಲಗರ, ಅರವಿಂದ ಪಾಟೀಲ್, ಮಾಣಿಕರಾವ ಪಾಟೀಲಗ, ಮಹೇಶ ಹುಡೇದ, ಶಶಿಕಾಂತ ಕೋಡ್ಲಿ, ಮಹಾದೇವ ಸ್ವಾಮಿ ಇತರರಿದ್ದರು. ಮಲ್ಲಿಕಾರ್ಜುನ ಸಂಗಮಕರ ಸ್ವಾಗತಿಸಿ ವಂದಿಸಿದರು. ಪ್ರತಿಷ್ಠಾನದಿಂದ ಡಾ.ಚಂದ್ರಶೇಖರ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.