ಚಿತ್ರದುರ್ಗ: ಪಾಲಕರು ವಿವಿಧ ಕಾರಣ ಮುಂದಿಟ್ಟು ಮಕ್ಕಳನ್ನು ದುಡಿಮೆಗೆ ದೂಡುವ ಪದ್ಧತಿ ಸರಿಯಲ್ಲ ಎಂದು ಎಡಿಸಿ ಟಿ.ಜವರೇಗೌಡ ಹೇಳಿದರು.
ನಗರದ ತರಾಸು ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಲ್ಲೇ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಉತ್ತಮ ಶಿಕ್ಷಣವನ್ನು ಕೊಡಿಸಿದರೆ ಭವಿಷ್ಯದಲ್ಲಿ ಅವರು ಉತ್ತಮ ನಾಗರಿಕರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಬಡತನ, ಅನಕ್ಷರಸ್ಥ ಪಾಲಕರು ಬಾಲ ಕಾರ್ಮಿಕ ಪದ್ಧತಿಗೆ ಕಾರಣವಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಚಿಕ್ಕ ವಯಸ್ಸಿನಲ್ಲಿ ಕಲಿಕೆ ಮುಖ್ಯವೇ ಹೊರತು ಗಳಿಕೆ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಸೂಕ್ತ ಜಾಗೃತಿ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ನಿಯಂತ್ರಿಸಬೇಕಿದೆ. ಬಾಲ ಕಾರ್ಮಿಕರು ಕಂಡು ಬಂದರೆ ತಕ್ಷಣ ಕಾರ್ಮಿಕ ಹಾಗೂ ಪೊಲೀಸ್ ಇಲಾಖೆಗಳಿಗೆ ಸಾರ್ವಜನಿಕರು ಮಾಹಿತಿ ಕೊಡಬೇಕು ಎಂದು ಕೋರಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಸಿ.ಎನ್.ಯಶೋಧರ ಮಾತನಾಡಿ, ಶಿಕ್ಷಣದಂಥ ಮೂಲ ಹಕ್ಕಿನಿಂದ ಮಕ್ಕಳು ವಂಚಿತರಾಗಬಾರದು. ಭಾರತದಲ್ಲಿ 1.2 ಕೋಟಿಗೂ ಹೆಚ್ಚು ಮಕ್ಕಳು ಅಪಾಯಕಾರಿ ದುಡಿಮೆಗಳಲ್ಲಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ಕರೆ ತಂದು ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಬಂಧ ಸ್ಪರ್ಧೆ ವಿಜೇತರ ಪೈಕಿ ಕೆಲವರು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ಹಾಗೂ ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತನಾದ ವಿದ್ಯಾರ್ಥಿ ಕುಟುಂಬಕ್ಕೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ವಿವಿಧ ಶಾಲೆ ವಿದ್ಯಾರ್ಥಿಗಳಿಗೆ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.
ಪ್ರಬಂಧ ಸ್ಪರ್ಧೆ: ಪರುಶುರಾಂಪುರ ಸರ್ಕಾರಿ ಪಪೂ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಡಿ.ಮೈನಾ (ಪ್ರ), ಚಿತ್ರದುರ್ಗ ಅಲ್ಪಸಂಖ್ಯಾತ ಮುರಾರ್ಜಿ ಪಪೂ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಎನ್.ದಾಕ್ಷಾಯಿಣಿ (ದ್ವಿ), ಮೊಳಕಾಲ್ಮೂರು ಚಿಕ್ಕೋಬನಹಳ್ಳಿ ಆಂಜನೇಯ ಪಪೂ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಇ.ಅಲ್ಫೀಯಾ ಬಾನು (ತೃ).
ಭಾಷಣ ಸ್ಪರ್ಧೆ: ಚಿತ್ರದುರ್ಗ ತಾಲೂಕು ತುರವನೂರು ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿಯರಾದ ಟಿ.ಲಾವಣ್ಯಾ (ಪ್ರ), ಸಿ.ಡಿ.ಲಕ್ಷ್ಮೀ (ತೃ), ಚಿತ್ರದುರ್ಗ ವಿದ್ಯಾವಿಕಾಸ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಡಿ.ವಿ.ನವಮಿ (ದ್ವಿ).
ಚಿತ್ರಕಲಾ ಸ್ಪರ್ಧೆ: ಚಿತ್ರದುರ್ಗ ವಿದ್ಯಾವಿಕಾಸ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಎಂ.ವೈ.ಭಾವಿನ್ (ಪ್ರ), ತುರವನೂರು ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಾದ ಎಂ.ಚಂದನ್ (ದ್ವಿ), ಡಿ.ಎ.ಯಶವಂತ ತೃತೀಯ ಸ್ಥಾನ ಪಡೆದಿದ್ದಾರೆ.
ಜನಪರ ಕಾರ್ಯಕ್ಕೆ ಜನರ ಸಹಕಾರ ಇರಲಿ
ಚಿತ್ರದುರ್ಗ: ಬಾಲಕಾರ್ಮಿಕ ಸೇರಿ ವಿವಿಧ ಜನವಿರೋಧಿ ಕಾರ್ಯಗಳ ನಿರ್ಮೂಲನೆಗೆ ಜನರ ಸಹಕಾರ ಬಹಳ ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೊಳಿ ಹೇಳಿದರು.
ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲಾ ಆವರಣದಿಂದ ರಂಗಮಂದಿರದವರೆಗೆ ಏರ್ಪಡಿಸಿದ್ದ ಬಾಲ ಕಾರ್ಮಿಕ ವಿರೋಧಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ಹೊರತರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚು ಇದೆ. ಎಲ್ಲಿಯೇ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಬೇಕಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಶಿವುಯಾದವ್, ಉಪಾಧ್ಯಕ್ಷ ಜಿ.ಸಿ.ದಯಾನಂದ, ಪಿಯು ಉಪನಿರ್ದೇಶಕ ಎನ್.ರಾಜು, ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಪಿ.ಸತೀಶ್‌ಕುಮಾರ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಪರುಶುರಾಮ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಕಾರ್ಮಿಕ ಮುಖಂಡರಾದ ರಮೇಶ್, ಗೌಸ್‌ಪೀರ್ ಇತರರು ಇದ್ದರು.
ಪ್ರತಿಜ್ಞಾ ವಿಧಿ ಬೋಧನೆ
ಚಿತ್ರದುರ್ಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಶಂಕರಪ್ಪ ಎನ್.ಪತ್ತಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಎಇಇ ರುದ್ರೇಶ್‌ನಾಯ್ಕ ಮತ್ತಿತರರು ಇದ್ದರು.