ಜಿಲ್ಲೆ

ಬಾಲ್ಯದ ದುಡಿಮೆ ಭವಿಷ್ಯಕ್ಕೆ ಮಾರಕ

ಚಿಕ್ಕಬಳ್ಳಾಪುರ : ಬಾಲಕಾರ್ಮಿಕ ಪದ್ಧತಿ ವಿರುದ್ಧದ ಜಾಗೃತಿ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬೈರಪ್ಪ ಶಿವಲಿಂಗ ನಾಯಿಕ ಶುಕ್ರವಾರ ಚಾಲನೆ ನೀಡಿದರು.

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಲ್ಲಿ ಪ್ರಚಾರಕ್ಕೆ ಹಸಿರು ನಿಶಾನೆ ತೋರಿದರು.

ಶಿಕ್ಷಣ ಪಡೆಯಬೇಕಾದ ವಯಸ್ಸಿನಲ್ಲಿ ಮಕ್ಕಳು ಹೋಟೆಲ್, ಡಾಬಾ, ಗ್ಯಾರೇಜ್, ಕಟ್ಟಡ ನಿರ್ಮಾಣ, ಕೃಷಿ ಸೇರಿ ವಿವಿಧ ವಲಯಗಳಲ್ಲಿ ಕೆಲಸದಲ್ಲಿ ತೊಡಗುವುದು ಭವಿಷ್ಯಕ್ಕೆ ಮಾರಕವಾಗುತ್ತದೆ. ಹಣ ಗಳಿಕೆ ಉದ್ದೇಶದಿಂದ ಪಾಲಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದು. ಹಾಗೆಯೇ ಮಾಲೀಕರು ಕಡಿಮೆ ಕೂಲಿ ಆಸೆಯಿಂದ ದುಡಿಸಿಕೊಳ್ಳಬಾರದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್.ವರಲಕ್ಷ್ಮೀ ಸೂಚಿಸಿದರು.

ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮ ಮೊಟಕುಗೊಳಿಸಲಾಯಿತು. ವಕೀಲ ಪರಿಷತ್ ಉಸ್ತುವಾರಿ ಸದಸ್ಯ ಬಿ.ವಿ.ಶ್ರೀನಿವಾಸ್, ವಕೀಲರ ಸಂಘದ ಉಪಾಧ್ಯಕ್ಷ ಬಾಲಾಜಿ, ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ಇತರರಿದ್ದರು.

ಇಲಾಖೆಗೆ ದೂರು ಕೊಡಿ: ಮಕ್ಕಳನ್ನು ಕೆಲಸಕ್ಕಿಟ್ಟುಕೊಳ್ಳುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದ್ದಲ್ಲಿ 50 ಸಾವಿರ ರೂ.ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆ ವಿಧಿಸಬಹುದು, ಮಕ್ಕಳನ್ನು ಕೆಲಸಕ್ಕೆ ಇಟ್ಟಕೊಂಡಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಕಾರ್ಮಿಕ ಇಲಾಖೆಗೆ ದೂರು ನೀಡಬೇಕು ಎಂದು ಮನವಿ ಮಾಡಿದರು.