ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮೊಬೈಲ್ ಅವಿಷ್ಕಾರ, ಸಾಮಾಜಿಕ ಜಾಲತಾಣದ ಅಬ್ಬರ.. ಬಾಲ್ಯವಿವಾಹದಂತ ಅನಿಷ್ಟ ಪದ್ಧತಿಗೆ ವೇದಿಕೆ ಕಲ್ಪಿಸಿಕೊಡುತ್ತಿದೆಯೇ? ಮಕ್ಕಳ ಭವಿಷ್ಯ ಹಾದಿ ತಪ್ಪುವ ಆತಂಕದಲ್ಲಿ ಸುಶಿಕ್ಷಿತ ಪಾಲಕರೇ ಮಕ್ಕಳ ಕೊರಳಿಗೆ ಬಾಲ್ಯ ವಿವಾಹದ ಉರುಳು ಹಾಕುತ್ತಿದ್ದಾರೆಯೇ?...
ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 5 ತಿಂಗಳ ಅವಧಿಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು ಇವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಜಾಲಾತಾಣದ ಕರಿನೆರಳು ಪ್ರಮುಖವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೈಸ್ಕೂಲ್ ಮೆಟ್ಟಿಲೇರಿದ ಮಕ್ಕಳೇ ಮೊಬೈಲ್ ಬಳಕೆಯಿಂದ ಜಾಲತಾಣಗಳಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಪ್ರೀತಿ ಪ್ರೇಮದ ಖೆಡ್ಡಾಗೆ ಬೀಳುತ್ತಿದ್ದು, ಪಾಲಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಮಕ್ಕಳು ಬಾಲ್ಯದಲ್ಲಿಯೇ ಹಾದಿ ತಪ್ಪುವ ಆತಂಕದಿಂದ ಪಾಲಕರೇ ಮತ್ತೊಂದು ಕಡೆ ಪರಿಚಯದ ವ್ಯಕ್ತಿಯೊಂದಿಗೆ ಮದುವೆ ಶಾಸ ಮುಗಿಸುವ ತರಾತುರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಜಾಲತಾಣವೇ ಕಾರಣ! ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯಬೇಕಿದ್ದ 16 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆದಿರುವ ಅಧಿಕಾರಿಗಳಿಗೆ ಈ ಪ್ರಕರಣಗಳಿಗೆ ಪ್ರಮುಖ ಕಾರಣಈ ಜಾಲತಾಣವೇ ಎಂಬುದು ಕಂಡುಬಂದಿದೆ ಎನ್ನಲಾಗಿದೆ. ಈ ಹಿಂದೆ ಅರಿವಿನ ಕೊರತೆ, ಬಡತನ, ಅನಕ್ಷರತೆ ಹೀಗೆ ಅನೇಕ ಕಾರಣಗಳಿಗೆ ಬಾಲ್ಯವಿವಾಹದಂತ ಅನಿಷ್ಟ ಪದ್ಧತಿ ನಡೆಯುತ್ತಿತ್ತು. ಆದರೆ ಶಿಕ್ಷಣ ಪಡೆದ ಸುಸುಕ್ಷಿತರೇ ಈ ಅನಿಷ್ಟ ಪದ್ಧತಿಗೆ ಅನಿವಾರ್ಯವಾಗಿ ಸಿಲುಕುವಂತಾಗಿದೆ ಎಂಬ ಅಂಶ ಬಯಲಾಗಿದೆ.
ಕರೊನಾ ಬಳಿಕ ಹೆಚ್ಚಳ: ಕಳೆದ ನಾಲ್ಕೈದು ವರ್ಷಗಳಿಗೆ ಹೊಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಸಾಕಷ್ಟು ಕಡಿಮೆಯಾಗಿದ್ದವು, ಸಾಮೂಹಿಕ ವಿವಾಹಗಳ ಮೇಲೂ ಇಲಾಖೆಗಳು ಹದ್ದಿನ ಕಣ್ಣಿಟ್ಟಿದ್ದರಿಂದ ಆನೇಕ ಬಾಲ್ಯವಿವಾಹಗಳಿಗೆ ತಡೆಯೊಡ್ಡಲಾಗಿತ್ತು. ಏತನ್ಯಧ್ಯೆ ಕರೊನಾ ಕಾಲಘಟ್ಟದಲ್ಲಿ ಆನ್‌ಲೈನ್ ತರಗತಿಗಳು ಆನಿವಾರ್ಯವಾದ ಕಾರಣ, ಮಕ್ಕಳಿಗೆ ಮೊಬೈಲ್ ಕೊಡಿಸುವುದೂ ಸಹ ಪಾಲಕರಿಗೆ ಅನಿವಾರ್ಯವಾಗಿತ್ತು. ಆರಂಭದಲ್ಲಿ ಪಠ್ಯಪಾಠಕ್ಕಷ್ಟ ಸೀಮಿತವಾಗಿದ್ದ ಮೊಬೈಲ್‌ಗಳು ಇನ್ನಿತರ ಕಡೆ ಮನಸ್ಸು ಹರಿಬಿಡಲು ದಾರಿಮಾಡಿಕೊಟ್ಟವು. ಇದಾದ ಬಳಿಕ ನಡೆಯುತ್ತಿದ್ದ ಬಾಲ್ಯವಿವಾಹ ಪ್ರಕರಣಗಳ ತನಿಖೆಯಲ್ಲಿ ಮೊಬೈಲ್ ಹೆಚ್ಚು ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿವೆ.
ದೊಡ್ಡಬಳ್ಳಾಪುರದಲ್ಲಿ 9 ಪ್ರಕರಣ: ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಡಿ ಜಿಲ್ಲೆಯಲ್ಲಿ 2024ರ ಏಪ್ರಿಲ್ನಿಂದ ಆಗಸ್ಟ್‌ವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ದೇವನಹಳ್ಳಿಯಲ್ಲಿ 6, ದೊಡ್ಡಬಳ್ಳಾಪುರದಲ್ಲಿ ಹೆಚ್ಚು 9 ಪ್ರಕರಣ, ಹೊಸಕೋಟೆಯಲ್ಲಿ 1 ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಇವುಗಳಲ್ಲಿ ಸುಶಿಕ್ಷಿತ ಪಾಲಕರೇ ಬಾಲ್ಯವಿವಾಹಕ್ಕೆ ಮುಂದಾಗಿವುದು ಕಂಡುಬಂದಿದೆ, ಅಲ್ಲದೆ ಇನ್ನಿತರ ಯಾವುದೇ ಕಾರಣವಿಲ್ಲದೆ ಚಿಕ್ಕವಯಸ್ಸಿನಲ್ಲೇ ಪ್ರೀತಿ ಪ್ರೇಮದ ಬಲೆ ಬಿದ್ದ ಮಕ್ಕಳ ಭವಿಷ್ಯಕ್ಕೆ ಹೆದರಿ ಈ ಬಾಲ್ಯ ವಿವಾಹ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.
ಡಿಸಿ ಸೂಚನೆ: ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಜಿಲ್ಲೆಯ ಪ್ರತಿ ಮನೆಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಾನೂನುಗಳ ಕರಪತ್ರವನ್ನು ಹಂಚುವ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನದ ಭಾಗವಾಗಿರುವ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಗ್ರಾಮಾಂತರ ಜಿಲ್ಲೆಯಲ್ಲಿ ಏಪ್ರಿಲ್ನಿಂದ ಆಗಸ್ಟ್‌ವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿದೆ. ಎಲ್ಲ ಪ್ರಕರಣಗಳಲ್ಲಿ ಬಾಲ್ಯವಿವಾಹ ತಡೆದು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮನೆಮನೆಗೆ ಕರಪತ್ರ ಹಂಚುವ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪತ್ತೆಯಾದ ಪ್ರಕರಣಗಳಲ್ಲಿ ಬಡತನ, ಕೌಟುಂಬಿಕ ಸಮಸ್ಯೆ ಜತೆಗೆ ಹದಿಹರೆಯದಲ್ಲೇ ಪ್ರೀತಿ-ಪ್ರೇಮದ ಸುಳಿಗೆ ಸಿಲುಕಿರುವ ಅಂಶ ಕಂಡುಬಂದಿದೆ.
ಮುದ್ದಣ್ಣ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂ.ಗ್ರಾಮಾಂತರ