ಜಿಲ್ಲೆ

ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸಿ

ಬಳ್ಳಾರಿ : ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಸಮುದಾಯಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಾಗ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದು ಬಾಲ್ಯ ವಿವಾಹ ತಡೆಗಟ್ಟಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಈ ಕುರಿತು ಅಧಿಕಾರಿಗಳು ಸಮನ್ವತೆ ಸಾಧಿಸಬೇಕು. ಶಾಲಾ ಕಾಲೇಜುಗಳಲ್ಲಿ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಬೇಕು. ತೆರೆದ ಮನೆ ಕಾರ್ಯಕ್ರಮದಡಿ ಪೊಲೀಸ್ ಠಾಣೆ, ನ್ಯಾಯಾಲಯ ಸೇರಿದಂತೆ ವಿವಿಧ ಇಲಾಖೆಗಳಿಗೆ ವಾರಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕರೆದೊಯ್ದು, ಕಾನೂನು ಸುವ್ಯವಸ್ಥೆ ಪ್ರಾತಕ್ಷಿಕೆ ತೋರಿಸಿ ಅಧಿಕಾರಿಗಳೊಂದಿಗೆ ನಿರ್ಭೀತಿಯಿಂದ ಸ್ನೇಹ ಬೆಸೆದುಕೊಳ್ಳಲು ಅನುವು ಮಾಡಿ ಎಂದು ಶಿಕ್ಷಣ ಇಲಾಖೆಗೆ ನಿರ್ದೇಶಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಪ್ರತಿ ಶಾಲೆಗಳಿಗೆ ವೇಳಾಪಟ್ಟಿಯಂತೆ ಪೊಲೀಸ್ ಸಿಬ್ಬಂದಿ ಬೀಟ್ ನಡೆಸಬೇಕು. ಇದರಿಂದ ಶಾಲೆಗಳ ಆವರಣದಲ್ಲಿ ಮದ್ಯಪಾನ, ಇತರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಏಪ್ರಿಲ್ 2024ರಿಂದ ಜೂನ್ 2024 ರ ಅಂತ್ಯಕ್ಕೆ13 ಪ್ರಕರಣಗಳು ದಾಖಲಾಗಿದ್ದು, 13 ಪ್ರಕರಣಗಳು ವಿಚಾರಣೆ ಮತ್ತು ಟ್ರಯಲ್ ಹಂತದಲ್ಲಿವೆ. ಅದೇ ರೀತಿಯಾಗಿ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 55 ಬಾಲ್ಯ ವಿವಾಹ ಪ್ರಕರಣಗಳ ಪೈಕಿ 53 ಬಾಲ್ಯವಿವಾಹವನ್ನು ತಡೆಯಲಾಗಿದ್ದು, 2 ಬಾಲ್ಯವಿವಾಹ ನಡೆದಿವೆ. ಈ ಎರಡು ಪ್ರಕರಣಗಳಿಗೆ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿಉರ್ದೇಶಕ ವಿಜಯ್‌ಕುಮಾರ ಸಭೆಗೆ ತಿಳಿಸಿದರು.