ಜಿಲ್ಲೆ

ಬಾಲೆಯರ ರಾಜ್ಯ ಫುಟ್ಬಾಲ್ ಟೂರ್ನಿ - ಆತಿಥೇಯರ ವಿಜಯಯಾನ

ಡಿ. ಎಂ. ಮಹೇಶ್

ದಾವಣಗೆರೆ: ದಿಟ್ಟ ಪ್ರದರ್ಶನ ನೀಡಿದ ಆತಿಥೇಯ ಕರುನಾಡು ಫುಟ್ಬಾಲ್ ಕ್ಲಬ್ ತಂಡ ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಅಡಿಯ ರಾಜ್ಯ ಮಟ್ಟದ ಬಾಲಕಿಯರ ಫುಟ್‌ಬಾಲ್ ಟೂರ್ನಿಯ ಲೀಗ್ ಪಂದ್ಯಾಟದಲ್ಲಿ ಮುನ್ನಡೆ ಸಾಧಿಸಿದೆ.

ನಗರದ ಲೂರ್ಡ್ಸ್ ಬಾಲಕರ ಶಾಲಾ ಮೈದಾನದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ 13 ವರ್ಷದೊಳಗಿನವರ ವಿಭಾಗದ ಹೊನಲು-ಬೆಳಕಿನ ಪಂದ್ಯ ಇಡೀ ದಿನದ ಹೈಲೈಟ್ ಪಂದ್ಯಗಳಲ್ಲಿ ಒಂದಾಗಿತ್ತು.

ಕರುನಾಡು ತಂಡದ ಬಾಲೆಯರು ಏಕಪಕ್ಷೀಯ ಆಟದ ಪ್ರದರ್ಶನ (11-0)ಕ್ಕೆ ಎದುರಾಳಿ ಹಳಿಯಾಳ್ ಫುಟ್ಬಾಲ್ ಕ್ಲಬ್ ಮಂಕಾಯಿತು. ವಿಜೇತ ತಂಡದ ಪರ ತುಳಸಿ 6, ವೈಷ್ಣವಿ-4, ಸ್ವರೂಪಾ ಕನ್ವರ್ 1 ಗೋಲ್‌ಗಳ ಕೊಡುಗೆ ನೀಡಿದರು.

ಇದೇ ವಯೋಮಾನದವರ ಮತ್ತೊಂದು ಲೀಗ್‌ನಲ್ಲಿ ಧಾರವಾಡದ ಸೇಂಟ್ ಕ್ಸೇವಿಯರ್ ತಂಡದ ಬಾಲಕಿಯರು ಚಿಕ್ಕಮಗಳೂರು ಫುಟ್ಬಾಲ್ ಕ್ಲಬ್ ಅನ್ನು 7-1 ಅಂತರದಲ್ಲಿ ಸೋಲಿಸಿ ಬೀಗಿದರು. ಧಾರವಾಡ ಪರ ಕಾರ್ಮೆಲ್, ಟೀನಾ ಸೌಂದರ್ಯ, ಕ್ಲೇರಾ ತಲಾ 2, ಪ್ರಭಾವತಿ ಒಂದು ಗೋಲ್ ಮಾಡಿದರು. ಪರಾಜಿತ ತಂಡದ ಗಂಗಾ ಒಂದು ಗೋಲ್ ಹೊಡೆದರು.

15 ವರ್ಷದೊಳಗಿನವರ ವಿಭಾಗದ ಲೀಗ್ ಪಂದ್ಯದಲ್ಲಿ ಹಾವೇರಿಯ ಡಿ-ಯುನೈಟೆಡ್ ತಂಡವು, ಚಿಕ್ಕಮಗಳೂರು ಎಫ್ ಸಿ ತಂಡವನ್ನು 3-1 ಅಂತರದಲ್ಲಿ ಪರಾಭವಗೊಳಿಸಿತು. ವಿಜೇತ ತಂಡದ ಪರ ಸಹನಾ 2, ಇಂದ್ರಾಣಿ 1, ಚಿಕ್ಕಮಗಳೂರು ತಂಡದ ಈಶ್ವರಿ 1 ಗೋಲ್ ಮಾಡಿದರು.