ಚಿಟಗುಪ್ಪ: ಭಕ್ತರ ಭವ ನೀಗಿಸುವ ಮನ್ನಾಎಖೇಳ್ಳಿ ಗ್ರಾಮದ ಶ್ರೀ ಬಾಲಮ್ಮ ದೇವಿಯ ದಿವ್ಯ ಸನ್ನಿಧಿಯಲ್ಲಿ ನವರಾತ್ರಿ ದಸರಾ ಉತ್ಸವಕ್ಕೆ ಅದ್ಧೂರಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಶನಿವಾರದಿಂದ ನಿರಂತರವಾಗಿ ಒಂಬತ್ತು ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಹೈದರಾಬಾದ್ ಮುಂಬೈ ರಾಷ್ಟಿಯ ಹೆದ್ದಾರಿ ಪಕ್ಕದಲ್ಲೇ ಇರುವ ಮಂದಿರಕ್ಕೆ ಅಸಂಖ್ಯಾತ ಭಕ್ತರು ಇದ್ದು, ಸಹಸ್ರಾರು ಭಕ್ತರು ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳಲು ಹರಕೆ ಹೊರುತ್ತಾರೆ. ಪೂರ್ಣಗೊಳ್ಳುತ್ತಿದ್ದಂತೆ ಹರಕೆ ತೀರಿಸುತ್ತಾರೆ. ರಾಜ್ಯ ಸೇರಿ ಮಹಾರಾಷ್ಟ ಆಂಧ್ರದ ಅಪಾರ ಭಕ್ತ ವೃಂದವೇ ಇಲ್ಲಿದೆ.
ಪ್ರತಿ ಮಂಗಳವಾರ, ಶುಕ್ರವಾರ ದೇವಿ ಹರಕೆ ಮುಟ್ಟಿಸಲು ಸಹಸ್ರಾರು ಭಕ್ತರು ಬರುವುದು ವಿಶೇಷ. ಪ್ರಸಕ್ತ ವರ್ಷ ಜಾತ್ರಾ ಮಹೋತ್ಸವ ಶನಿವಾರದಿಂದ ಅ.೨೩ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಭಜನೆ, ಕೀರ್ತನೆ, ಚಕ್ರಿ ಭಜನೆ ಸೇರಿ ವಿವಿಧ ಧಾರ್ಮಿಕ, ಪ್ರವಚನ ಕಾರ್ಯಕ್ರಮ ನಡೆಯಲಿವೆ.
ಭಕ್ತರು, ತುಳಜಾಪುರಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ನಿತ್ಯ ಪ್ರಸಾದ ವಿತರಣೆ ನಡೆಯಲಿದೆ. ಜಾತ್ರೋತ್ಸವಕ್ಕೆ ಮಂದಿರ ಆಡಳಿತ ಮಂಡಳಿ ಹಾಗೂ ನಾಡಹಬ್ಬ ದಸರಾ ಉತ್ಸವ ಸಮಿತಿ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಸಮಿತಿ ಅಧ್ಯಕ್ಷ ಹಣಮಂತಪ್ಪ ಮರಕುಂದ ತಿಳಿಸಿದ್ದಾರೆ.
ಶ್ರೀ ದುರ್ಗಾದೇವಿ ದರ್ಶನ ಪ್ರವಚನ: ಅ೧೫ ರಿಂದ ೨೨ ರವರೆಗೆ ನಿತ್ಯ ಸಂಜೆ ೮ರಿಂದ ೧೦ಗಂಟೆವರೆಗೆ ಬೇಮಳಖೇಡದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರು ಗೋರ್ಟಾ ಅವರಿಂದ ಶ್ರೀ ದುರ್ಗಾದೇವಿ ದರ್ಶನ ಪ್ರವಚನ ನಡೆಯಲಿದೆ. ಮರಪಳ್ಳಿಯ ಸಂಗೀತ ಕಲಾವಿದ ಮಲ್ಲಿಕಾರ್ಜುನ ದೇವಗಿರಿ ಅವರಿಂದ ಭಕ್ತಿ ಸಂಗೀತಕ್ಕೆ ನವಲಿಂಗ ಪಾಟೀಲ್ ತಬಲಾ ಸಾಥ್ ನೀಡಲಿದ್ದಾರೆ.
ನಾಡಹಬ್ಬ ನವರಾತ್ರಿ ಉತ್ಸವ ಉದ್ಘಾಟನೆ: ೧೫ರಂದು ರಾತ್ರಿ ೮ಕ್ಕೆ ಲಿಂಗೋಳ, ವಿಠಲಪುರದ ಶ್ರೀ ಶಾಂತಿ ಬಾಬಾ ಸಾನ್ನಿಧ್ಯದಲ್ಲಿ ಹುಮನಾಬಾದ್ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷೆ ಪ್ರೇಮಾ ರಾಜಶೇಖರ ಪಾಟೀಲ್ ಉದ್ಘಾಟಿಸಲಿದ್ದಾರೆ. ಗ್ರಾಪಂ ಅಧ್ಯಕ್ಷ ರಾಜಕುಮಾರ ಅಗಸಿ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿದ್ಯಾ ಪಾಟೀಲ್, ಗೀತಾ ಪಂಡಿತ್ ಚಿದ್ರಿ, ಸುನಿತಾರಾಸ್ರೂ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.