ಜಿಲ್ಲೆ

ಬಾಲಕಿಯನ್ನು ಬಲಿ ಪಡೆದ ಪಿಕ್‌ನಿಕ್

ಚಿಂಚೋಳಿ: ಚಂದ್ರಂಪಳ್ಳಿ ಜಲಾಶಯದಲ್ಲಿ ಮುಳುಗಿ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬಳು ಶನಿವಾರ ಮೃತಪಟ್ಟಿದ್ದು, ಏಕೇಕ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಲಬುರಗಿಯ ಖಾದ್ರಿ ಚೌಕ್ ಬಳಿಯ ಸಂತೋಷ ಕಾಲನಿ ನಿವಾಸಿ ಭಾವನಾ ಉದಯಕುಮಾರ ಪಾಟೀಲ್ (೧೦) ಮೃತ ಬಾಲಕಿ. ಕಲಬುರಗಿಯ ಖಾಸಗಿ ಶಾಲೆಯೊಂದು ೭೦ ಮಕ್ಕಳನ್ನು ಪಿಕ್‌ನಿಕ್‌ಗಾಗಿ ಚಂದ್ರಂಪಳ್ಳಿ ಜಲಾಶಯಕ್ಕೆ ಕರೆದೊಯ್ದಿತ್ತು. ಮಧ್ಯಾಹ್ನ ಒಂದಿಷ್ಟು ಮಕ್ಕಳು ಡ್ಯಾಮ್‌ನಲ್ಲಿ ಇಳಿದಿದ್ದಾರೆ. ಇದನ್ನು ಯಾರೂ ಗಮನಸಿಲ್ಲ. ನಾಲ್ಕು ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಕುರಿಗಾಹಿಗಳಾದ ಅವಿನಾಶ ಮತ್ತು ಬಾಬು ಮೂವರನ್ನು ರಕ್ಷಿಸಿದ್ದಾರೆ. ಆದರೆ ಭಾವನಾ ನೀರಿನಲ್ಲಿ ಮುಳುಗಿ ಅಸುನೀಗಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸಿಪಿಐ ಅಂಬರಾಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಅಗ್ನಿಶಾಮಕ ದಳ ತಂಡ ಮೃತದೇಹವನ್ನು ಹೊರತೆಗೆದಿದೆ.