ಜಿಲ್ಲೆ

ಬಾಲಕಿ ಮೇಲೆ ಅತ್ಯಾಚಾರ ಜಿಲ್ಲಾ ಮಡಿವಾಳ ಯುವ ಘಟಕದಿಂದ ಪ್ರತಿಭಟನೆ

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಚಯಸ್ಥನೇ ಐದು ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಅಪ್ರಾಪ್ತ ಬಾಲಕ ಅತ್ಯಾಚಾರ ಮಾಡಿರುವುದನ್ನ ಖಂಡಿಸಿ ಜಿಲ್ಲಾ ಮಡಿವಾಳ ಯುವ ಘಟಕದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಾರಿಗೆ ಬಸ್ ಚಾಲಕರೊಬ್ಬರ ಪುತ್ರ ಚನ್ನರಾಯಪಟ್ಟಣದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ 16 ವರ್ಷದ ಅಪ್ರಾಪ್ತ ಈ ಕೃತ್ಯ ಎಸಗಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹೀನಕೃತ್ಯ ಎಸಗಿರುವ ಬಾಲಕ ಮತ್ತು ಆತನ ಮನೆಯವರು ಈ ಹಿಂದೆ ನೊಂದ ಬಾಲಕಿಯ ಮನೆಯಲ್ಲೇ ಬಾಡಿಗೆದಿದ್ದರು.
ಹೀಗಾಗಿ ಎರಡೂ ಮನೆಯವರಿಗೆ ಹಲವು ವರ್ಷಗಳಿಂದ ಪರಿಚಯ ಇತ್ತು. ಇತ್ತೀಚಿನ ದಿನಗಳಲ್ಲಿ ಡಬಲ್ ಬೆಡ್‌ರೂಂ ಮನೆ ಬೇಕು ಎಂದು ಸ್ವಲ್ಪ ದೂರಕ್ಕೆ ಹೋಗಿದ್ದರು. ಕೂಲಿಯನ್ನೇ ನಂಬಿ ಬದುಕುತ್ತಿರುವ ಬಾಲಕಿ ಪೋಷಕರು ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ, ಆಟವಾಡುತ್ತಿದ್ದ ಬಾಲಕಿಗೆ ಚಾಕೋಲೆಟ್ ಕೊಡುವುದಾಗಿ ನಂಬಿಸಿ ಮನೆಗೆ ಕರೆದುಕೊಂಡು ಹೋದ ಅಪ್ರಾಪ್ತ ಕಾಮುಕ, ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಹೊಟ್ಟೆ ನೋವು ಎಂದಾಗ ಬೆಳ್ಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಅತ್ಯಾಚಾರ ನಡೆದಿರುವುದು ಬಯಲಾಗಿದೆ ಎಂದು ದೂರಿದರು.
ನಂತರ ಬಾಲಕಿಯನ್ನು ನಗರದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನಡುವೆ ಹಲವು ಪ್ರಭಾವ ಬಳಸಿ, ದೌರ್ಜನ್ಯಕ್ಕೊಳಗಾಗಿರುವ ಬಾಲಕಿ ಪೋಷಕರು ಹಾಗೂ ಸಂಬಂಧಿಕರಿಗೆ ಅವರ ಕಡೆಯವರು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ಇದರಿಂದ ಬಾಲಕಿ ಹಾಗೂ ಪೋಷಕರಿಗೆ ರಕ್ಷಣೆ ಕೊಡಬೇಕು. ಬಾಲಕಿಯ ಭವಿಷ್ಯದ ಬಗ್ಗೆ ನಮಗೆ ಚಿಂತೆ ಮೂಡಿದೆ. ಆಕೆಯ ಭವಿಷ್ಯ ರೂಪಿಸಿಕೊಳ್ಳಲು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸದ್ಯ ಬಾಲಕನನ್ನು ಬಾಲ ಮಂದಿರದಲ್ಲಿ ಇರಿಸಲಾಗಿದೆ. ಆತ ಮತ್ತು ಮನೆಯವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮಡಿವಾಳ ಯುವ ಘಟಕದ ಎಸ್.ಡಿ.ರಘು, ವಿಜಯಲಕ್ಷ್ಮೀ ಅಂಜನಪ್ಪ, ಟಿ.ಶಶಿಧರ್, ಹೆಚ್.ಎನ್.ಮಲ್ಲೇಶ್, ಬಿ.ಜೆ.ಜಯಣ್ಣ ಇತರರಿದ್ದರು.