ಕಲಬುರಗಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಉತ್ತರ ಪ್ರದೇಶ ಮೂಲದ ನಗರದಲ್ಲಿ ಪಾನಿಪುರಿ ಮಾರುತ್ತಿದ್ದ ಮೋನು ಗೋಮತಿ (21) ಶಿಕ್ಷೆಗೆ ಒಳಗಾದವರು. ಬಾಡಿಗೆ ಶೆಡ್‌ನಲ್ಲಿ ವಾಸವಾಗಿದ್ದ ಮೋನು, ಆಟವಾಡುತ್ತಿದ್ದ ಬಾಲಕಿಗೆ ರೊಟ್ಟಿ ತಂದುಕೊಡುವಂತೆ ಹೇಳಿದ. ಮಳಿಗೆಯೊಂದರಿಂದ ರೊಟ್ಟಿ ತಂದುಕೊಟ್ಟ ಬಾಲಕಿಯನ್ನು ಶೆಡ್ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಮೋನು ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಟೆಕ್ಟರ್ ವಿಜಯಕುಮಾರ ಅವರು ತನಿಖೆ ನಡೆಸಿದ್ದರು. ವಿವಿಧ ಕಾಯ್ದೆಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದರು.
ವಾದ ವಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ವಿಶೇಷ ಪೋಕ್ಸೊ) ಎಫ್‌ಟಿಎಸ್‌ಸಿ–1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಮೋನು ಗೋಮತಿಗೆ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ 20 ವರ್ಷ ಜೈಲು ಶಿಕ್ಷೆ ಹಾಗೂ ₹28,500 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದರು. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ₹ 5 ಲಕ್ಷ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.