ಚಾಮರಾಜನಗರ: ಅಪ್ರಾಪ್ತ ನೊಂದ ಬಾಲಕಿಯನ್ನು ಮದುವೆ ಆಗಲು ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿ ಆದೇಶಿಸಿದೆ.
ಕೊಳ್ಳೇಗಾಲ ತಾಲೂಕಿನ ವಡ್ಡರದೊಡ್ಡಿ ಸಮೀಪದಲ್ಲಿರುವ ಗೋಡೇಸ್ ನಗರ ಗ್ರಾಮದ ಆರೋಪಿ ತಂಗರಾಜು (35) ಎಂಬಾತ ಅಪ್ರಾಪ್ತ ನೊಂದ ಬಾಲಕಿಯನ್ನು ಮದುವೆಯಾಗುವ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿ, ಕೊಲೆ ಮಾಡಿರುವ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ 2018 ರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ತನಿಖೆ ಪೂರೈಸಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿದ್ದರು.
ಆರೋಪಿ ಅಪ್ರಾಪ್ತ ಬಾಲಕಿಯನ್ನು ಕೊಲೆಮಾಡಿರುವುದು ಸಾಬೀತಾದ ಕಾರಣ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ರೂ, ದಂಡವನ್ನು ವಿಧಿಸಿ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ.ಕೃಷ್ಣ ಅವರು ತೀರ್ಪು ನೀಡಿದ್ದಾರೆ.
ಆರೋಪಿತನ ದಂಡದ ಹಣ 30 ಸಾವಿರ ರೂ, ಹಣದಲ್ಲಿ ನೊಂದ ಬಾಲಕಿಗೆ 25 ಸಾವಿರ ರೂ, ಹಣವನ್ನು ಹಾಗೂ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ವತಿಯಿಂದ ನೊಂದ ಬಾಲಕಿಯ ಪಾಲಕರಿಗೆ 5 ಲಕ್ಷ ರೂ, ಹಣವನ್ನು ಪರಿಹಾರ ನೀಡಬೇಕೆಂದು ಆದೇಶಿಸಿದೆ. ಸರ್ಕಾರದ ಪರವಾಗಿ ಮತ್ತು ಆರೋಪಿಯ ವಿರುದ್ಧ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದವನ್ನು ಮಂಡಿಸಿದ್ದರು.