ಕೆ.ಆರ್.ನಗರ: ಬಾಲ ಕಾರ್ಮಿಕ ಮತ್ತು ಬಾಲ್ಯ ವಿವಾಹ ಪದ್ಧತಿ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಘಟನೆಗಳು ಸುತ್ತಮುತ್ತ ಕಂಡು ಬಂದಲ್ಲಿ ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ, ತಾಲೂಕು ವಕೀಲರ ಸಂಘ, ಪೋಲಿಸ್ ಇಲಾಖೆ, ಮೈಸೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರಾಜ್ಯಶಾಶ್ತ್ರ ವಿಭಾಗದ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದ್ದು, ಅದನ್ನು ತಡೆಗಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. 16 ವರ್ಷದೊಳಗಿನ ಮಕ್ಕಳನ್ನು ಹೋಟೆಲ್, ಅಂಗಡಿ, ಅಪಾಯಕಾರಿ ಸ್ಥಳಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಮಾಹಿತಿ ನೀಡಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಗಾಯತ್ರಿ ಮಾತನಾಡಿದರು. ಸಿಪಿಐ ರೇವಣ್ಣ, ಕಾರ್ಮಿಕ ನಿರೀಕ್ಷಕ ಎಚ್.ಪಿ.ಜಯಣ್ಣ, ಮೈಸೂರು ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಎಚ್.ಪಿ.ಮಲ್ಲಿಕಾರ್ಜುನ, ಪ್ರಾಂಶುಪಾಲ ಡಾ.ಬಿ.ಟಿ.ವಿಜಯ್, ಕನ್ನಡ ಪ್ರಾಧ್ಯಾಪಕ ವಿಜಯ್, ಶ್ರೀ ವೀರಭದ್ರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಎಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಟರಾಜ್ ಹಾಜರಿದ್ದರು.