ಜಿಲ್ಲೆ

ಬಾಲಕಾರ್ಮಿಕರ ತಪಾಸಣೆ ಹೆಚ್ಚಿಸಿ

ಚಾಮರಾಜನಗರ: ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ರಕ್ಷಿಸಲು ಜಿಲ್ಲಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ತಪಾಸಣೆ ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲಕಾರ್ಮಿಕರ ರಕ್ಷಣೆ, ಪುನರ್ವಸತಿ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ನಿಷೇಧ, ನಿಯಂತ್ರಣ ಕಾಯ್ದೆ ಕುರಿತು ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ತಪಾಸಣೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚುರುಕುಗೊಳಿಸಬೇಕು. ಬಾಲಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟ ಅಂಗಡಿ, ಉದ್ದಿಮೆ ಸಂಸ್ಥೆಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವ ಜತೆಗೆ ಅಂಗಡಿ ಉದ್ಯಮ ಪರವಾನಗಿ ರದ್ದು ಮಾಡುವ ಕಠಿಣ ಕ್ರಮಗಳಿಗೂ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು. 2024ನೇ ಏಪ್ರಿಲ್ ನಿಂದ 2025ರ ಮಾರ್ಚ್‌ವರೆಗೆ ತಪಾಸಣೆ ಕೈಗೊಂಡ ವೇಳೆ 25 ಬಾಲಕಾರ್ಮಿಕರನ್ನು ಗುರುತಿಸಲಾಗಿದೆ. ಆದರೆ 7 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ದಾಖಲಾಗಿದೆ. ಉಳಿದ ಪ್ರಕರಣಗಳಲ್ಲಿಯೂ ಎಫ್‌ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರವೇ ಕ್ರಮ ವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಿದ ಮಕ್ಕಳನ್ನು ಅವರ ಪಾಲಕರಿಗೆ ಒಪ್ಪಿಸುವುದಷ್ಟೇ ಕಾರ್ಮಿಕ ಇಲಾಖೆಯ ಕೆಲಸವಲ್ಲ. ರಕ್ಷಿಸಲ್ಪಟ್ಟ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪಿಸುವ ಜವಾಬ್ದಾರಿ ಸಹ ಕಾರ್ಮಿಕ ಇಲಾಖೆಯೊಂದಿಗೆ ಇತರ ಇಲಾಖೆಗಳಿಗೂ ಇದೆ. ಶಿಕ್ಷಣ, ಕೌಶಲ ತರಬೇತಿಯಂತಹ ಕಾರ್ಯಕ್ರಮಗಳನ್ನು ಮಕ್ಕಳಿಗೆ ಮುಂದುವರಿಸಬೇಕು. ವಸತಿ ಶಾಲೆ, ಹಾಸ್ಟೆಲ್‌ಗಳಂತಹ ಸೌಲಭ್ಯವನ್ನು ಕಲ್ಪಿಸಬೇಕು. ವೃತ್ತಿ ಶಿಕ್ಷಣ, ನರ್ಸಿಂಗ್ ಸೇರಿದಂತೆ ಮಕ್ಕಳಿಗೆ ಇರುವ ಆಸಕ್ತಿ ವಿಷಯದಲ್ಲಿ ಶಿಕ್ಷಣ ಕೊಡಿಸಿ ಅವರ ಭವಿಷ್ಯಕ್ಕೆ ನೆರವಾಗಬೇಕು ಎಂದರು.

ಮಕ್ಕಳನ್ನು ಏಕೆ ದುಡಿಮೆಗೆ ದೂಡಲಾಗಿದೆ ಎಂಬ ಬಗ್ಗೆ ಕುಟುಂಬದಿಂದ ಕೌನ್ಸಲಿಂಗ್ ಮೂಲಕ ತಿಳಿದುಕೊಳ್ಳಬೇಕು. ಉದ್ಯೋಗ, ಆರ್ಥಿಕ ಸೌಲಭ್ಯಗಳು ಅಗತ್ಯವಿದ್ದಲ್ಲಿ ಕಲ್ಪಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನೆರವಾಗುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆ ಮಾದರಿಯಾಗಬೇಕು. ಈ ಬಗ್ಗೆ ಪೂರ್ವ ಯೋಜನೆ ಹಾಗೂ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ ಮಾತನಾಡಿ, ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಿದ ಬಳಿಕ ಮುಂದೆ ವಹಿಸಬೇಕಿರುವ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಎಂ.ಸವಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಬಚಪನ್ ಬಚಾವೋ ಆಂದೋಲದ ರಾಜ್ಯ ಸಂಯೋಜಕ ಬಿನು ವರ್ಗಿಸ್, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಂ.ಮಹೇಶ್, ತಾಲೂಕು ಕಾರ್ಮಿಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.