ಜಿಲ್ಲೆ

ಬಾಲಕಾರ್ಮಿಕ ಪದ್ಧತಿ ಶಿಕ್ಷಾರ್ಹ, ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಸುಬ್ಬರಾವ್ ಎಚ್ಚರಿಕೆ, ದೇವನಹಳ್ಳಿಯಲ್ಲಿ ಕಾನೂನು ಅರಿವು ಕಾರ್ಯಾಗಾರ

ಬೆಂಗಳೂರು ಗ್ರಾಮಾಂತರ: ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಅಪರಾಧಕ್ಕೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಸುಬ್ಬರಾವ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ಸಹಾಯವಾಣಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಜಯಪುರದ ಅಲ್ಪಸಂಖ್ಯಾತರ ಮೌಲನಾ ಆಜಾದ್ ಮಾದರಿ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

14 ವರ್ಷದೊಳಗಿನ ಯಾವುದೇ ಮಕ್ಕಳನ್ನು, ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾನೂನಿನಡಿ ಶಿಕ್ಷಾರ್ಹ ಅಪರಾಧ. 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿಸಿಕೊಂಡರೆ ಸಂಬಂಧಪಟ್ಟ ಮಾಲೀಕರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಹಾಗೂ ಗರಿಷ್ಠ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿ ಕೊಂಡಿರುವುದು ಕಂಡು ಬಂದಲ್ಲಿ, ಸಾರ್ವಜನಿಕರು ಕೂಡಲೇ ಮಕ್ಕಳ ಉಚಿತ ಸಹಾಯವಾಣಿ-1098 ಗೆ ಕರೆ ಮಾಡಬಹುದು ಎಂದರು.

ದುಶ್ಚಟಗಳಿಗೆ ದಾಸರಾಗಬೇಡಿ: ಸಿಗರೇಟು, ಗುಟ್ಕಾ, ಪಾನ್ ಮಸಾಲಾ ಮುಂತಾದವುಗಳ ಸೇವನೆಯಿಂದ ಆರೋಗ್ಯಹಾಳಾಗುತ್ತದೆ, ಚಿಕ್ಕ ವಯಸ್ಸಿನಲ್ಲೇ ಮಕ್ಕಳು ದುಶ್ಚಟಗಳಿಗೆ ದಾಸರಾಗಿ ಭವಿಷ್ಯವನ್ನು ಕತ್ತಲು ಮಾಡಿಕೊಳ್ಳುತ್ತಾರೆ, ಈ ಬಗ್ಗೆ ಪಾಲಕರು ಹಾಗೂ ಶಾಲೆಯ ಶಿಕ್ಷಕರು ನಿಗಾವಹಿಸಬೇಕಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹಗಾರ್ತಿ ವಿದ್ಯಾರಾಣಿ ಮನವಿ ಮಾಡಿದರು.

ಶಾಲೆಕಾಲೇಜು ಆವರಣದಲ್ಲಿ 100 ಮೀಟರ್ ಪ್ರದೇಶದಲ್ಲಿ ತಂಬಾಕು, ಧೂಮಪಾನ ಮತ್ತು ಮಧ್ಯಪಾನ ಮಾರಾಟ ನಿಷೇಧಿಸಲಾಗಿದೆ ಮತ್ತು ಇಂಥ ಸ್ಥಳದಲ್ಲಿ ಈ ಕೃತ್ಯ ಕಂಡುಬಂದರೆ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.