ಎನ್.ಆರ್.ಪುರ: ಬಾಲಕರು, ಬಾಲಕಿಯರಿಂದ ಕೆಲಸ ಮಾಡಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಕೊಪ್ಪ ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್‌ಕುಮಾರ್ ಎಚ್ಚರಿಕೆ ನೀಡಿದರು.
ಶುಕ್ರವಾರ ಕಾರ್ಮಿಕ ಇಲಾಖೆಯಿಂದ ತಾಲೂಕಿನ ಹೋಟೆಲ್, ಗ್ಯಾರೇಜ್, ಅಂಗಡಿ, ಇಟ್ಟಿಗೆ ತಯಾರಿಕಾ ಘಟಕ, ಅಂಗಡಿಗಳು ಸೇರಿದಂತೆ 26 ಸ್ಥಳಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರಿದ್ದಾರೆಯೇ ಎಂದು ಪರೀಕ್ಷಿಸಿದರು. ನಂತರ ಅಂಗಡಿ, ಹೋಟೆಲ್ ಮಾಲೀಕರಿಗೆ ಕರಪತ್ರ ವಿತರಿಸಿ ಕಾರ್ಮಿಕರ ಕಾಯ್ದೆ ಬಗ್ಗೆ ಅರಿವು ಮೂಡಿಸಿ ಮಾತನಾಡಿ, 14 ವರ್ಷದ ಒಳಗಿನ ಬಾಲಕರಿಂದ ಕೆಲ ಮಾಡಿಸಿದರೆ ಮಾಲೀಕರಿಗೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ. 18 ವಷರ್ದ ಒಳಗಿನ ಕಿಶೋರಾವಸ್ಥೆ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದು ಸಹ ಶಿಕ್ಷಾರ್ಹ ಅಪರಾಧವಾಗುತ್ತದೆ. 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆಯಾಗಬಹುದು. 50 ಸಾವಿರ ರೂಪಾಯಿವರೆಗೆ ದಂಡವನ್ನೂ ವಿಧಿಸಬಹುದು. ಆದ್ದರಿಂದ ಯಾರೂ ಬಾಲ, ಬಾಲಕಿಯರಿಂದ ಕೆಲಸ ಮಾಡಿಸಬಾರದು ಎಂದು ಸೂಚಿಸಿದರು.
ಕಂದಾಯ ಇಲಾಖೆಯ ಶಿರಸ್ತೇದಾರ್ ವೇಣುಗೋಪಾಲ್, ಅನಿಲ್, ರಾಹುಲ್, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ನಿರಂಜನ್, ಶಿಕ್ಷಣ ಇಲಾಖೆಯ ಬಿಐಇಆರ್ ಟಿ.ತಿಮ್ಮೇಶಪ್ಪ ಇದ್ದರು.