ಕಲಬುರಗಿ: ಶಾಲಾ ವಾಹನವೊಂದು ಡಿಕ್ಕಿ ಹೊಡೆದು ಬಾಲಕನೊಬ್ಬ ಮೃತಪಟ್ಟ ಘಟನೆ ಸಂಗಮೇಶ್ವರ ಕಾಲನಿ ಬಳಿಯ ರಸ್ತೆಯಲ್ಲಿ ಬುಧವಾರ ಸಂಜೆ ಜರುಗಿದೆ. ಇದರಿಂದಾಗಿ ರೊಚ್ಚಿಗೆದ್ದ ಜನರು ಪ್ರತಿಭಟನೆ ನಡೆಸಿ, ಸ್ಕೂಲ್ ವ್ಯಾನ್ ಮೇಲೆ ಕಲ್ಲು ತೂರಿದ್ದಾರೆ. ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಒಂದೂವರೆ ವರ್ಷದ ಮನೋಜ ಶರಣು ರೆಡ್ಡಿ ಬಲಿಯಾದ ಬಾಲಕ. ತಂದೆ-ತಾಯಿ ಮೂಲತಃ ಆಳಂದ ತಾಲೂಕಿನ ವೈಜಾಪುರದವರಾಗಿದ್ದು, ಸದ್ಯ ಶಾಮಸುಂದರ ನಗರದಲ್ಲಿ ವಾಸವಾಗಿದ್ದಾರೆ. ಚಾಲಕನ ನಿರ್ಲಕ್ಷದಿಂದ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸೇರಿದ ವಾಹನ ಆಟವಾಡುತ್ತಿ ಬಾಲಕನ ಮೇಲೆ ಹರಿದಿದೆ. ತಲೆ ಇನ್ನಿತರರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದೆ.
ಮಗು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಜನರು, ಸುತ್ತಲಿನವರು, ಕುಟುಂಬದವರು ವಾಹನವನ್ನು ನಿಲ್ಲಿಸಿ ಪ್ರತಿಭಟನೆ ಶುರುವಿಟ್ಟರು. ಸಹನೆ ಕಳೆದುಕೊಂಡ ಕೆಲವರು ಶಾಲಾ ಬಸ್ ಮೇಲೆ ಕಲ್ಲು ತೂರಿದರು. ಸುದ್ದಿ ಅರಿಯುತ್ತಲೇ ಸಂಚಾರ ಡಿಸಿಪಿ ಚಂದ್ರಪ್ಪ, ಎಸಿಪಿ ಮಹ್ಮದ್ ಇಸ್ಮಾಯಿಲ್ ಶರೀಫ್, ಇನ್‌ಸ್ಪೆಕ್ಟರ್ ಖಾಜಾಹುಸೇನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜನರನ್ನು ಸಮಾಧಾನಗೊಳಿಸಿದರು.
ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು, ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ರಸ್ತೆಯನ್ನು ಏಕಮುಖ ಮಾರ್ಗವಾಗಿಸಬೇಕು. ವಾಹನಗಳನ್ನು ನಿಯಂತ್ರಿಸಬೇಕು, ಬೇಕಾಬಿಟ್ಟಿ ವಾಹನ ಚಲಾವಣೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಬಾಲಕ ಮೃತಪಟ್ಟಿದ್ದರಿಂದ ಕುಟುಂಬದವರ ಹಾಗೂ ಸಂಬAಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಲಹೊತ್ತಿನ ಹಿಂದೆ ಆಟವಾಡಿಕೊಂಡಿದ್ದ ಮಗು ಇಲ್ಲವಾಗಿದ್ದಕ್ಕೆ ಎಲ್ಲರು ಮಮ್ಮಲು ಮರುಗಿದರು. ಸಂಚಾರ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ.