ಜಿಲ್ಲೆ

ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳಬೇಡಿ

ಬಸವಕಲ್ಯಾಣ: ಗ್ರಾಮಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ರೈತ ಸಮಿತಿ ರಚಿಸುವ ಜತೆಗೆ ಸಮಿತಿ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಶಾಲೆಯತ್ತ ಒಲವು ಬೆಳೆಸುವ ಕೆಲಸ ಮಾಡಬೇಕು ಎಂದು ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ರಾಜ್ಯ ಮಹಾಪೋಷಕರು ಹಾಗೂ ರಾಜ್ಯ ಶಿಕ್ಷಣ ನೀತಿ ರಚನೆ ಆಯೋಗದ ಸದಸ್ಯ ಡಾ.ನಿರಂಜನಾರಾಧ್ಯ ವಿ.ಪಿ ಸಲಹೆ ನೀಡಿದರು.

ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಿAದ ಬಸವ ಮಹಾಮನೆ ಪರಿಸರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿ ಕೆಲಸಗಳಲ್ಲಿನ ಬಾಲಕಾರ್ಮಿಕ ವಿರುದ್ಧ ರೈತರು ವಿಷಯ ಕುರಿತ ಕಾರ್ಯಾಗಾರಲ್ಲಿ ತರಬೇತಿ ನೀಡಿ, ರೈತರು ತಮ್ಮ ಹೊಲದಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದರು.

ಶಾಲೆಗಳಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿ, ಬಾಲ ಕಾರ್ಮಿಕ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ, ಗುಣಾತ್ಮಕ ಶಿಕ್ಷಣಕ್ಕಾಗಿ ಪೂರಕ ಕಲಿಕಾ ಕೇಂದ್ರಗಳು, ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣ ಜಾರಿ ತರುವಲ್ಲಿ ಸಮಿತಿಗಳು ನಾಗರಿಕರೊಂದಿಗೆ ಸೇರಿ ಹೋರಾಟಕ್ಕೆ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಾಪುರ, ಯರಂಡಿ, ಬೆಟಬಾಲಕುಂದಾ, ಧನ್ನೂರ ಕೆ, ಸಸ್ತಾಪುರ, ತಡೋಳ, ಇಸ್ಲಾಂಪುರ, ಮುಡಬಿ ಮತ್ತು ಕಲಖೋರ ಸೇರಿ ವಿವಿಧ ಗ್ರಾಮಗಳ ಸಣ್ಣ ರೈತರು, ರೈತ ಉತ್ಪಾದಕರ ಕಂಪನಿ, ರೈತ ಸಂಘ ಹಾಗೂ ಯುವಕರು ಸೇರಿ ೫೦ಕ್ಕೂ ಹೆಚ್ಚು ಜನ ಭಾಗವಹಿಸಿ ಡಾ.ನಿರಂಜನಾರಾಧ್ಯ ಅವರೊಂದಿಗೆ ಸಂವಾದ ನಡೆಸಿದರು.

ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಾಲಿವಾನ, ಜಿಲ್ಲಾ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಯಶವಂತ ಪಾಟೀಲ್, ಬಸವರಾಜ ಕಣಜೆ ಉಪಸ್ಥಿತರಿದ್ದರು. ಸಂಸ್ಥೆ ಯೋಜನಾ ಸಂಯೋಜಕ ಸಂಪತ್ ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಮುದಾಯ ಸಂಘಟಕಿ ಸುನಂದಾ ವಂದಿಸಿದರು. ನಾಗರಾಜ ಶೀಲವಂತ ನಿರೂಪಣೆ ಮಾಡಿದರು.