ಜಿಲ್ಲೆ

ಬಾರ್ ಆರಂಭ ವಿರೋಧಿಸಿ ಧರಣಿ

Dharwad

ನವಲಗುಂದ: ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಬಾರ್ ಆರಂಭಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ನೂರಾರು ಮಹಿಳೆಯರು ರೈತ ಸೇನಾ ಕರ್ನಾಟಕ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ಮಂಗಳವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ವೀರೇಶ ಸೊಬರದಮಠ ಮಾತನಾಡಿ, ಗ್ರಾಮಸ್ಥರ ಹಿತದೃಷ್ಟಿ ಹಾಗೂ ರೈತ ಕುಟುಂಬಗಳು ಕುಡಿತದ ಚಟಕ್ಕೊಳಗಾಗಿ ಜೀವನ ಹಾಳು ಮಾಡಿಕೊಳ್ಳದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಬಾರ್ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಅಲ್ಲದೆ, ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಡಾಬಾ ಆರಂಭಕ್ಕೆ ಅನುಮತಿ ನೀಡಲಾಗಿದೆ ಹೊರತು ಬಾರ್​ಗೆ ಅಲ್ಲ ಎಂದು ಪಿಡಿಒ ತಿಳಿಸಿದ್ದಾರೆ. ಆದರೆ, ಬಾರ್ ಪ್ರಾರಂಭಿಸಲು ಯಾರು ಅನುಮತಿ ನೀಡಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ, ಬಾರ್​ಗೆ ನೀಡಿದ ಅನುಮತಿ ರದ್ದುಗೊಳಿಸಬೇಕು. ಬಾರ್ ಬಂದ್ ಮಾಡುವವರೆಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ಉತ್ತರ ಬರುವವರೆಗೂ ಧರಣಿ ಮುಂದುವರಿಯುತ್ತದೆ ಎಂದು ಸೊಬರದಮಠ ಎಚ್ಚರಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮಸ್ಥರು, ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.