ಜಿಲ್ಲೆ

ಬಾರಸೆ ಸೊಸೈಟಿಗೆ ನಿರ್ದೇಶಕರ ಆಯ್ಕೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬಾರಸೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ಪ್ರಕ್ರಿಯೆ ನಡೆಯಿತು.


ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ 10 ಬೆಂಬಲಿತರು, ಒಬ್ಬ ಜೆಡಿಎಸ್ ಬೆಂಬಲಿತ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಒಬ್ಬರು ಆಯ್ಕೆಯಾದರು. ನೂತನ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತರಾದ ಬಾವಜಾನ್, ಬಸವರಾಜು, ಮಹಾದೇವ, ನಾಗೇಗೌಡ, ಎಸ್.ಆರ್ ಮಹೇಂದ್ರ, ಕೆ.ಜೆ.ಮಂಜುನಾಥ, ಅಮೃತೇಶ, ಇ.ಪಿ.ಲೋಕೇಶ್, ಭಾಗ್ಯಮ್ಮ, ಟಿ.ವೀರಭದ್ರ, ಜೆಡಿಎಸ್ ಬೆಂಬಲಿತ ಎಚ್.ಕೆ.ಶೋಭಾ ಮತ್ತು ಸ್ವತಂತ್ರ ಅಭ್ಯರ್ಥಿ ಬಿ.ಕೆ.ಸಿದ್ದರಾಜೇ ಅರಸ್ ಆಯ್ಕೆಯಾದರು. ಸಹಕಾರ ಇಲಾಖೆಯ ಗಿರೀಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸ್ಥಾನವನ್ನು ಗೆಲ್ಲುವ ಮೂಲಕ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬೆಟ್ಟದಪುರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಪ್ರಕಾಶ್ ಎಂ.ಎತ್ತಿನಮನಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದೀಶ್ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.