ಜಿಲ್ಲೆ

ಬಾಯಿ ಮಾತಿನ ಉತ್ತರಕ್ಕೆ ಜಡ್ಜ್ ಗರಂ

ಚಿತ್ರದುರ್ಗ: ಮಕ್ಕಳ ಕಾಣೆ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು, ತನಿಖೆ ನಡೆಯುತ್ತಿದೆ ಎಂಬ ಬಾಯಿ ಮಾತಿನ ಉತ್ತರ ಬೇಕಿಲ್ಲವೆಂದು ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ‌್ಯದರ್ಶಿ ಎಂ.ವಿಜಯ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಾಲಭವನದಲ್ಲಿ ಶುಕ್ರವಾರ ಕಾಣೆಯಾದ ಮಕ್ಕಳ ಪತ್ತೆ ಕುರಿತಂತೆ ಪಾಲಕರು ಹಾಗೂ ಪೊಲೀಸ್ ತನಿಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತನಿಖೆ ಪ್ರಗತಿ ಹಾಗೂ ಪ್ರಯತ್ನಗಳ ಕುರಿತು ಲಿಖಿತ ರೂಪದಲ್ಲಿ ಮಾಸಿಕ ವರದಿ ಸಲ್ಲಿಸಬೇಕು. ಅದನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಕಾಣೆಯಾದ ಮಕ್ಕಳ ಪತ್ತೆ ಕಾರ‌್ಯ ಚುರುಕುಗೊಳಿಸಬೇಕು. ತನಿಖೆ ಪ್ರಗತಿಯ ಬಗ್ಗೆ ಪಾಲಕರಿಗೆ ಮಾಹಿತಿ ನೀಡಬೇಕು. ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ‌್ಯಕ್ರಮಗಳನ್ನು ಆಯೋಜಿಸಬೇಕು. ಈ ಮೂಲಕ ಮಕ್ಕಳಿಗೆ ಬಾಲ್ಯವಿವಾಹ, ಪೋಕ್ಸೋ, ಮಾದಕ ವಸ್ತುಗಳ ನಿಷೇಧ ಕಾಯ್ದೆ ಕುರಿತು ಮಾಹಿತಿ ನೀಡಬೇಕು. 2021ರಿಂದ 2024ರ ವರೆಗೆ ಜಿಲ್ಲೆಯಲ್ಲಿ 345 ಮಕ್ಕಳ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಇವುಗಳ ಪೈಕಿ 337 ಪಕ್ರರಣಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಇದೇ ಅವಧಿ ಪಾಲಕರೊಂದಿಗೆ 127 ಮಕ್ಕಳ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 124ರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಸವಿತಾ, ಬಡಾವಣೆ ಪಿಐ ನಹೀಮ್ ಅಹಮದ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ್, ಗುರುಮೂರ್ತಿ ಇತರರು ಇದ್ದರು.