ಜಿಲ್ಲೆ

ಬಾಯಿ ಚಪಲಕ್ಕೆ ಟೀಕಿಸುವುದನ್ನು ಬಿಡಿ

ಕೋಲಾರ: ನಾನು ಪಾರ್ಟ್ ಟೈಂ ಅಲ್ಲ, ಫುಲ್‌ಟೈಮ್ ಎಮ್ಮೆಲ್ಸಿ. ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿನ ಬಗ್ಗೆ ಶೇ.100 ವಿಶ್ವಾಸವಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಿಂದ ಆಕಾಂಕ್ಷಿಗಳು ಅನೇಕರಿದ್ದರೂ ಅವರ ಮನವೊಲಿಸಲಾಗಿದೆ. ನನಗಿದು ನೇರಾನೇರ ಚುನಾವಣೆ, ಬಾಯಿ ಚಪಲಕ್ಕೆ ಟೀಕಿಸುವುದಲ್ಲ ಎಂದು ನುಡಿದರು.

ಕ್ಷೇತ್ರ ಬಿಜೆಪಿ ಹಿಡಿತದಲ್ಲಿತ್ತು. ಕಳೆದ ಬಾರಿ ಎದುರಾಳಿ ಅಭ್ಯರ್ಥಿಗೆ ಹಿಂದಿನ ಎರಡು ಚುನಾವಣೆಗಳಲ್ಲಿ ಸೋತ ಅನುಕಂಪಕ್ಕೆ ಮತದಾರರು ಬೆಂಬಲಿಸಿದ್ದರು. ಈ ಬಾರಿ 1.6 ಲಕ್ಷ ಮತದಾರರಿದ್ದು, ಜಿಲ್ಲೆಯಲ್ಲಿ 19,000 ಮತದಾರರಲ್ಲಿ 15000 ಮತ ಪಡೆಯುವುದು ನಮ್ಮ ಗುರಿ. ಜಿಲ್ಲೆಯ 27 ಹೋಬಳಿಗಳಲ್ಲೂ ಮತಗಟ್ಟೆ ತೆರೆಯಲಾಗಿದೆ ಎಂದರು.

ಹರಕೆ ಕುರಿ ಅಲ್ಲ: ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಮಾತನಾಡಿ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇದ್ದ ಎಲ್ಲ ಗೊಂದಲ ಬಗೆಹರಿದಿದೆ. ಆಕಾಂಕ್ಷಿಗಳ ಮನವೊಲಿಸಲಾಗಿದೆ. ಅ.8ರಂದು ಮಧ್ಯಾಹ್ನ 11.30ಕ್ಕೆ ವರಿಷ್ಠರ ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಸುತ್ತೇನೆ ಎಂದರು.

ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಹೋಬಳಿ, ತಾಲೂಕುವಾರು ತಂಡ ರಚಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ಬಿಜೆಪಿ ಕೋರ್ ಕಮಿಟಿ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಬಾಲಾಜಿ, ನಗರಸಭೆ ಸದಸ್ಯ ಮುರಳೀಗೌಡ ಇತರರಿದ್ದರು.

ಪ್ರಾಮಾಣಿಕರಾಗಿದ್ದರೆ ಹೆದರೋದ್ಯಾಕೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಹಿಂದೆ ಇಡಿ ದಾಳಿ ನಡೆದಾಗ ನಾನು ಪ್ರಾಮಾಣಿಕ, ಯಾವುದೇ ತನಿಖೆಗೂ ಸಿದ್ಧ ಎಂದಿದ್ದರು. ಈಗ ಸಿಬಿಐ ದಾಳಿ ನಡೆದಿದ್ದರೂ ಪ್ರಾಮಾಣಿಕರಾಗಿದ್ದರೆ ಹೆದರುವ ಅಗತ್ಯವಿಲ್ಲ. ಉಪ ಚುನಾವಣೆ ಕಾರಣಕ್ಕೆ ಸಿಬಿಐ ಅನ್ನು ಬಿಟ್ಟು ದಾಳಿ ನಡೆಸುವ ಅವಶ್ಯಕತೆ ಯಾರಿಗೂ ಇಲ್ಲ ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಕೋಲಾರದಲ್ಲಿರುವ 19,000 ಮತದಾರರಲ್ಲಿ ಸುಮಾರು 4500 ನಕಲಿ ಮತದಾರರಿರುವ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ನಕಲಿ ಮತದಾರರನ್ನು ಪತ್ತೆ ಹಚ್ಚಿ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಸಿದ್ದರಾಜು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಎಮ್ಮೆಲ್ಸಿ