ಜಿಲ್ಲೆ

ಬಾಬೂಜಿ ಆದರ್ಶ ಅನುಸರಿಸಿ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸಲಹೆ, ರೈತರ ಅಭಿವೃದ್ಧಿಗೆ ಮಾಜಿ ಉಪಪ್ರಧಾನಿ ಕೊಡುಗೆ ಅಪಾರ

ನೆಲಮಂಗಲ: ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್ ಅವರ ಆದರ್ಶಯುತ ಚಿಂತನೆಗಳು ಅನುಸರಣೀಯವಾದವು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಾಬುಜಗಜೀವನರಾಮ್ ಅವರ 35ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಬು ಜಗಜೀವನರಾಮ್ ಅವರು ಉಪಪ್ರಧಾನಿಯಾಗಿದ್ದ ವೇಳೆ ದೇಶದ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆ ತಂದು, ರೈತರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

ಯಾವುದೇ ಒಂದು ಸಮುದಾಯಕ್ಕೆ ಬಾಬೂಜಿ ಸೀಮಿತರಲ್ಲ. ದೇಶ ಪ್ರತಿಯೊಂದು ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಆಹಾರ ಪದಾರ್ಥ ಸಂಗ್ರಹಿಸುವ ವ್ಯವಸ್ಥೆ ಜಾರಿಗೊಳಿಸಿದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ದೇಶಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರು ಪರಸ್ಪರ ವಿರೋಧಿಗಳು ಎಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರ ಎಂದರು.

ಕರೊನಾ ಸೋಂಕಿನಿಂದಾಗಿ ಶಾಲೆಗಳನ್ನು ಆರಂಭ ಮಾಡಿಲ್ಲ. ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಅದರೆ ಗ್ರಾಮೀಣ ಭಾಗದಲ್ಲಿ ಮೊಬೈಲ್ ಇಲ್ಲದೇ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಾಸಕರು ಕೂಡಲೇ ಸ್ಥಳೀಯವಾಗಿ ಕೆಲ ಇಲಾಖೆಗಳು ಹಾಗೂ ಖಾಸಗಿ ಕಾರ್ಖಾನೆಗಳು ಸಿಎಸ್‌ಆರ್ ಂಡ್ ಮೂಲಕ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್ ಶಾಸಕರಿಗೆ ಮನವಿ ಮಾಡಿದರು.

ಸಿಪಿಐ ಎ.ವಿ.ಕುಮಾರ್, ಎಸ್‌ಐ ಎನ್.ಸುರೇಶ್, ತಾಪಂ ಇಒ ಮೋಹನ್‌ಕುಮಾರ್, ನಗರಸಭೆ ಪೌರಾಯುಕ್ತ ಮಂಜುನಾಥ್, ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ನಿಡವಂದರಾಜು, ನಾರಾಯಣಮೂರ್ತಿ, ನಾರಾಯಣಸ್ವಾಮಿ, ಬೊಮ್ಮನಹಳ್ಳಿನಾಗರಾಜು, ರಾಜ್‌ಗೋಪಾಲ್, ಶಿರಸ್ತೇದಾರ್ ಶ್ರೀನಿವಾಸಮೂರ್ತಿ, ರಾಜಸ್ವ ನಿರೀಕ್ಷಕ ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.