ಕಲಬುರಗಿ: ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಮ್ ಜಯಂತ್ಯುತ್ಸವವನ್ನು ಏ.೫ರಂದು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಂಜೀತ್ ಮೂಲಿಮನಿ ತಿಳಿಸಿದರು.
ನೂತನ ಅಧ್ಯಕ್ಷನನ್ನಾಗಿ ನನನ್ನು ಆಯ್ಕೆ ಮಾಡಿದ್ದು, ಕಾರ್ಯಾಧ್ಯಕ್ಷರಾಗಿ ಪ್ರಹ್ಲಾದ್ ಹಡಗಿಲಕರ್, ಪ್ರಚಾರ ಸಮಿತಿಗೆ ಉಮೇಶ ಮಾಳಗೆ ಅಧ್ಯಕ್ಷ, ಗಣೇಶ ಕಟ್ಟಿಮನಿ ಉಪಾಧ್ಯಕ್ಷರನ್ನಾಗಿ ಸಮಾಜದ ಮುಖಂಡರು ಆಯ್ಕೆ ಮಾಡಿದ್ದು, ಎಲ್ಲರು ಒಳಗೊಂಡು ವಿಭಿನ್ನವಾಗಿ ಜಯಂತಿ ಆಚರಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಯಂತ್ಯುತ್ಸವ ನಿಮಿತ್ತ ಕ್ರೀಡಾಕೂಟ ಏರ್ಪಡಿಸಲಾಗುವುದು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಟೌನ್ ಹಾಲ್ ಬಳಿ ಇರುವ ಬಾಬುಜೀ ಮೂರ್ತಿವರೆಗೆ ಬೃಹತ್ ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಮುಖಂಡ ದಶರಥ ಕಲಗುರ್ತಿ ಮಾತನಾಡಿ, ಮಾದಿಗ ಸಮಾಜಕ್ಕೆ ಒಳ ಮೀಸಲು ನೀಡದೆ ಕಾಂಗ್ರೆಸ್ ಮೋಸ ಮಾಡುತ್ತಿದೆ. ಮೂರು ತಿಂಗಳ ಗಡುವು ಮುಗಿದರು ಕ್ರಮ ಕೈಗೊಳ್ಳುತ್ತಿಲ್ಲ. ಸಚಿವ ಎಚ್.ಸಿ.ಮಹಾದೇವಪ್ಪನವರು ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಮುಂದಾಗಿದ್ದು, ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು. ಕೋರ್ಟ್ ಆದೇಶದ ನೆಪ ಹೇಳದೆ ಒಳ ಮೀಸಲು ಜಾರಿ ನಂತರ ನೇಮಕ ಆರಂಭಿಸಬೇಕು. ಇಲ್ಲದಿದ್ದರೆ ಸಚಿವರು, ಶಾಸಕರು, ಸಿಎಂ ಸೇರಿ ಎಲ್ಲರಿಗೂ ರಾಜ್ಯಾದ್ಯಂತ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ರಮೇಶ ವಾಡೇಕರ್, ಶಾಮ ನಾಟಿಕಾರ, ರಾಜು ವಾಡೇಕರ್, ನಾಗರಾಜ ಗುಂಡಗುರ್ತಿ, ಬಾಬು ಸುಂಟಾಣ ಇತರರಿದ್ದರು.