ಎಚ್.ಡಿ.ಕೋಟೆ: ಡಾ.ಬಾಬು ಜಗಜೀವನ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಏ.5, ಏ14ರಂದು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಡಾ.ಬಾಬು ಜಗಜೀವನ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಡಾ.ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮವನ್ನು ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸುವುದಾಗಿ ಸಮಾಜದ ಮುಖಂಡರು ತಿಳಿಸಿರುವುದರಿಂದ ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಲಾಗುವುದು. ಅದೇ ರೀತಿ ಅಂಬೇಡ್ಕರ್ ಜಯಂತಿಯನ್ನು ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಒಟ್ಟಿಗೆ ಒಂದೇ ದಿನಾಂಕ ನಿಗದಿ ಮಾಡಿ ಆ ಕಾರ್ಯಕ್ರಮಕ್ಕೆ ರಾಷ್ಟ್ರ ಮತ್ತು ರಾಜ್ಯದ ರಾಜಕೀಯ ನಾಯಕರನ್ನು ಆಹ್ವಾನಿಸಿ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ. ಸರ್ಕಾರದಿಂದ ಇಬ್ಬರು ರಾಷ್ಟ್ರ ನಾಯಕರ ಜಯಂತಿಯನ್ನು ಆಚರಿಸಲಾಗುವುದು ಎಂದರು.
ಸಭೆಗೂ ಮುನ್ನ ಅಧಿಕಾರಿಗಳ ಹಾಜರಾತಿ ಪರಿಶೀಲನೆ ನಡೆಸಿದ ಶಾಸಕರು, ಪೂರ್ವಭಾವಿ ಸಭೆಗೆ ಹಾಜರಾಗದೆ ಕೆಲವರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಎಚ್ಚೆತ್ತುಕೊಂಡಿಲ್ಲ. ಪೂರ್ವಭಾವಿ ಸಭೆಗೆ ಹಾಜರಾಗದ ಅಧಿಕಾರಿಗಳಿಂದ 10 ಸಾವಿರ ರೂ.ದಂಡವನ್ನು ಏ.10ರೊಳಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಸೂಲು ಮಾಡಬೇಕು. ನಿಗದಿ ಮಾಡಿದ ದಿನದಂದು ನೀಡದಿದ್ದರೆ ನಂತರದ ದಿನಗಳಲ್ಲಿ 20 ಸಾವಿರ ರೂ. ನೀಡಬೇಕು ಎಂದು ತಿಳಿಸಿದರು.
ಸಭೆಗೆ ಗೈರು ಹಾಜರಾಗದವರಿಗೆ ದಂಡ ವಿಧಿಸಲಾಗುತ್ತದೆ ಎಂಬ ಮಾಹಿತಿ ತಿಳಿದು ಕೆಲ ಇಲಾಖೆ ಅಧಿಕಾರಿಗಳು ತಡವಾಗಿ ಸಭೆಗೆ ಹಾಜರಾದರು. ಇದನ್ನು ಗಮನಿಸಿದ ಶಾಸಕರು ಸಭೆ 11 ಗಂಟೆಗೆ ನಿಗದಿ ಆಗಿದ್ದರೂ ಮಧ್ಯಾಹ್ನ 1 ಗಂಟೆ ಆದರೂ ಅಧಿಕಾರಿಗಳು ಸಭೆಗೆ ಬರುವುದಿಲ್ಲ ಎಂದರೆ ನಾನು ಸರಿಯಾಗಿ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ ಎಂದು ನನ್ನ ಮೇಲೆ ಸಮಾಜಕ್ಕೆ ತಪ್ಪು ಮಾಹಿತಿ ರವಾನೆ ಆದಂತೆ. ಹಾಗಾಗಿ ಇಂತಹ ತೀರ್ಮಾನಕ್ಕೆ ಬರಲಾಗಿದೆ. ಕಡ್ಡಾಯವಾಗಿ ಅಧಿಕಾರಿಗಳು ಪಾಲನೆ ಮಾಡಬೇಕು. ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಶ್ರೀನಿವಾಸ್, ಇಒ ಧರಣೀಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್, ಸಮುದಾಯದ ಮುಖಂಡರಾದ ಎಂ.ಡಿ.ಮಂಚಯ್ಯ, ಡಾ.ಮರಿದೇವಯ್ಯ, ಪಿ.ನಾಗರಾಜು, ಕೊತ್ತೇಗಾಲ ತಿಮ್ಮಯ್ಯ, ಪರಶಿವಮೂರ್ತಿ, ಜಿನ್ನಹಳ್ಳಿ ರಾಜನಾಯಕ, ಆನಗಟ್ಟಿ ದೇವರಾಜು, ಪುಟ್ಟಮಾದು ಕೋಟೆ, ಪ್ರಕಾಶ ಬುದ್ದ, ವನಸಿರಿ ಶಂಕರ್, ಆನಗಟ್ಟಿ ಸೋಮಣ್ಣ, ಮಂಜು ಹೊಸಮಾಳ, ಉಡ ನಾಗರಾಜು, ಹೂವಿನಕೊಳ ರವಿ, ಹೊಮ್ಮರಗಳ್ಳಿ ಮಹಾದೇವು, ಬಸವರಾಜು, ಉಮೇಶ, ರಾಜಣ್ಣ ಇದ್ದರು.