ಮೈಸೂರು: ಕನ್ನಡದ ಖ್ಯಾತ ಕತೆಗಾರ್ತಿ, ವಿಚಾರವಾದಿ ಬಾನು ಮುಷ್ತಾಕ್ (ಎದೆಯ ಹಣತೆ ಕೃತಿಯ ಮೂಲ ಲೇಖಕರು) ಮತ್ತು ದೀಪಾ ಭಾಸ್ತಿ (ಇಂಗ್ಲಿಷ್‌ಗೆ ಅನುವಾದಿಸಿದವರು) ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿಯ ಬುಕರ್ ಪ್ರಶಸ್ತಿ ಲಭಿಸಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹಾಸನ ಮೂಲದ ಬಾನು ಮುಷ್ತಾಕ್ ಅವರು ವಕೀಲರು, ಬರಹಗಾರರು, ಹೋರಾಟಗಾರರು, ಪರ್ತಕರ್ತೆ. ಜತೆಗೆ, ರಾಜಕೀಯದಲ್ಲೂ ಹೆಜ್ಜೆ ಇಟ್ಟವರು. ಸಮುದಾಯದ ಸಂಪ್ರದಾಯವಾದಿ ನಿಲುವು ನಡುವೆಯೂ ತಮ್ಮ ದನಿಯನ್ನು ಎಲ್ಲರಿಗೂ ಕೇಳುವಂತೆ ಮಾಡಿದವರು. ಮಹಿಳೆಯರ ದುಃಖ-ದುಮ್ಮಾನಗಳಿಗೆ ಮಾತಾದವರು.
ದಲಿತ ಚಳವಳಿ, ರೈತ ಚಳವಳಿಯಂಥ ಜನಪರ ಹೋರಾಟಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದವರು ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ.
ದೀಪಾ ಭಾಸ್ತಿ ಅವರು ಕನ್ನಡದ ಹಣತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಪತ್ರಕರ್ತೆ, ಲೇಖಕರು, ಅನುವಾದಕರು. ಇವರು ಇಂಗ್ಲಿಷ್ ಪತ್ರಿಕಾರಂಗದಲ್ಲಿ ಕೆಲಸ ಮಾಡಿದ ಬಳಿಕ ಮಡಿಕೇರಿಗೆ ಮರಳಿ ಬಂದು ಫ್ರೀಲ್ಯಾನ್ಸ್ ಲೇಖಕರಾದರು.
ಕೊಡಗಿನ ಗೌರಮ್ಮ, ಶಿವರಾಮ ಕಾರಂತ ಮೊದಲಾದವರ ಬರಹಗಳನ್ನು ಇಂಗ್ಲಿಷ್ ಓದುಗರಿಗೆ ತಲುಪಿಸಿರುವರು. ಈ ಇಬ್ಬರು ಜನಪರ ಲೇಖಕಿಯರ ಸಂಯುಕ್ತ ಪರಿಶ್ರಮದಿಂದ ಕರ್ನಾಟಕಕ್ಕೆ ಬುಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ದನಿ ಕೇಳುವಂತಾಯಿತು. ಇವರ ಸಾಹಿತ್ಯ ಸೇವೆ ಇದೇ ರೀತಿ ಮುಂದುವರಿಯುತ್ತಿರಲೆಂದು ಶ್ರೀಗಳು ಹಾರೈಸಿದ್ದಾರೆ.