ಜಿಲ್ಲೆ

ಬಾಣಾಂತಿಯರ ಸಾವು ಖಂಡಿಸಿ ಬಿಜೆಪಿ ಪ್ರತಿಭಟನೆ: ಸಮಗ್ರ ತನಿಖೆಗೆ ಆಗ್ರಹ

ಹಾಸನ: ಕೆಲ ವಾರಗಳಿಂದ ರಾಜ್ಯದಲ್ಲಿ ಕರಾಳ ದಿನಗಳು ಸಂಭವಿಸುತ್ತಿದ್ದು, ಸರಿಯಾದ ಚಿಕಿತ್ಸೆ ಸಿಗದೇ ಹಾಗೂ ನಿರ್ಲಕ್ಷೃದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 217ಕ್ಕೂ ಹೆಚ್ಚು ಬಾಣಂತಿಯರ ಸಾವು ಆಗಿದ್ದು, ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟ ಕುಟುಂಬ ಮತ್ತು ಕಲ್ಯಾಣ ಇಲಾಖೆ ಸಚಿವ ಮತ್ತು ಆರೋಗ್ಯ ಇಲಾಖೆ ಸೇರಿ ಇಬ್ಬರು ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿಯರ ವ್ಯಾಪಕ ಸಾವಿನ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸುವರ್ಣಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದು, ಬಂಧನಕ್ಕೂ ಒಳಗಾಗಿ ಅನೇಕ ಬೇಡಿಕೆಗಳಿಗಾಗಿ ಒತ್ತಾಯಿಸಲಾಗಿದೆ. ಸದನದ ಒಳಗೆ ಪ್ರತಿಪಕ್ಷವಾಗಿ ಬಿಜೆಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈಫಲ್ಯಗಳ ಮೇಲೆ ಅನೇಕ ದಿನಗಳ ಚರ್ಚೆ ನಡೆಸಿತ್ತು. ನಂತರವೂ ಬಾಣಂತಿಯರ ಸಾವು ಮುಂದುವರೆದಿದೆ. ಆದ್ದರಿಂದ ರಾಜ್ಯ ಮಹಿಳಾ ಮೋರ್ಚಾ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದೆ ಎಂದರು.

ಪ್ರಮುಖ ಬೇಡಿಕೆಗಳೆಂದರೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಬಾಣಂತಿಯರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು. ಸಾವನ್ನಪ್ಪಿದ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಆ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಕೂಡಲೇ ಸರ್ಕಾರ ನಿಯಮವನ್ನು ರೂಪಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ವ್ಯಾಪಕ ಸಾವುಗಳನ್ನು ತಡೆಯಲು ವಿಫಲರಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಬಾಣಂತಿಯರ ಸಾವಿಗೆ ನೈಜ ಕಾರಣಗಳನ್ನು ತಿಳಿದು ಅದನ್ನು ನಿಯಂತ್ರಿಸಲು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಬಳ್ಳಾರಿ, ಬೆಳಗಾವಿ, ತಿಪಟೂರು, ಬೆಂಗಳೂರು, ಕೊಪ್ಪಳ, ರಾಯಚೂರು, ಕಲ್ಬುರ್ಗಿಯಿಂದ ಬರುತ್ತಿರುವ ವರದಿಗಳ ಪ್ರಕಾರ ಈ ಸಾವುಗಳಿಗೆ ಕಾರಣವೇನೆಂದರೆ, ಸರ್ಕಾರ ಬಳಸುತ್ತಿರುವ ಕಳಪೆ ಗುಣಮಟ್ಟದ ಔಷಧಗಳು. ಗರ್ಭಿಣಿ ಸ್ತ್ರೀಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನನಿ ಶಿಶು ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷ ಮಾತೃತ್ವ ಅಭಿಯಾನ, ಸುರಕ್ಷಿತ್ ಮಾತೃತ್ವ ಆಶ್ವಾಸನ್, ಪ್ರಧಾನ ಮಂತ್ರಿ ಮಾತೃವಂದನ ಯೋಜನೆ, ಅನಿಮಿಯ ಆ್ಯಂಡ್ ಚೈಲ್ಡ್ ಪ್ರೊಟೆಕ್ಷನ್ ಕಾರ್ಡ್ ಪೋಷಣ್ ಅಭಿಯಾನ್, ರಾಷ್ಟ್ರೀಯ ಬಾಲ್ ಸ್ವಾಸ್ಥ್ಯ ಕಾರ್ುಕ್ರಮ ಬಾಣಾಂತಿಯರಿಗೆ ಪೋಶನ್ ಅಭಿಯಾನ್, ಜನನಿ ಸುರಕ್ಷಾ ಯೋಜನೆ, ಆಹಾರದ ಕಿಟ್, ಕ್ಯಾಲ್ಸಿಯಂ, ಪ್ರೊಟೀನ್ ಸಾಮಗ್ರಿಗಳನ್ನು ನೀಡುವುದು. ನಿಯಮಿತ ತಪಾಸಣೆ ನಡೆಸುವುದು ಹಾಗೂ ಮಾತೃ ವಂದನ ಯೋಜನೆಯ ಹಣ ತಲುಪಿಸುವುದರಲ್ಲಿ ರಾಜ್ಯ ಸರ್ಕಾರದ ಎರಡು ಇಲಾಖೆಗಳು ವಿಫಲವಾಗಿವೆ ಎಂದು ಆರೋಪಿಸಿದರು.

ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಕರ್ನಾಟಕ ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸರ್ಕಾರದ ಹೊಣೆಗೇಡಿತನದಿಂದ ಸಂಪೂರ್ಣ ಹದಗೆಟ್ಟಿದೆ. ಸಿಬ್ಬಂದಿ ಕೊರತೆಯಿಂದ ಪಿಎಚ್‌ಸಿ ಗಳು ಸೊರಗುತ್ತಿವೆ. ಆಂಬುಲೆನ್ಸ್ ಗಳಿಗೆ ಸರಿಯಾಗಿ ಡೀಸೆಲ್ ಸಿಗುತ್ತಿಲ್ಲ. ಚಾಲಕರಿಗೆ ಸರ್ಕಾರ ಸಂಬಳ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ಬ್ಲಡ್ ಬ್ಯಾಂಕ್ ಕೊರತೆ ಇದ್ದು, ಸರ್ಕಾರವು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಪರಿಶೀಲಿಸಿ ಸುವ್ಯವಸ್ಥಿತಗೊಳಿಸಬೇಕು. ಹಾಗೂ ಮೇಲ್ದರ್ಜಿಗೇರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ನಂತರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿ.ಎಚ್. ನಾರಾಯಣಗೌಡ, ಯೋಗೀಶ್, ಸುಷ್ಮಾ ಕಾಂತರಾಜು, ವನಜಾಕ್ಷಿ, ವಿಜಯಲಕ್ಷ್ಮೀ ಅಂಜನಪ್ಪ, ಶೋಭಾ ಗಣೇಶ್, ಇಂದೀರಾ ನಾಗರಾಜು, ಸಂಗೀತಾ ಇತರರು ಉಪಸ್ಥಿತರಿದ್ದರು.