ಜಿಲ್ಲೆ

ಬಾಣಹಳ್ಳಿ ರೈತರು, ಗ್ರಾಮಸ್ಥರಿಂದ ಧರಣಿ

ಮೂಗೂರು: ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಲಕ್ಷಾಂತರ ರೂ.ದುರುಪಯೋಗವಾಗಿದೆ ಎಂದು ಆರೋಪಿಸಿ ರೈತರು ಹಾಗೂ ಗ್ರಾಮಸ್ಥರು ಬಾಣಹಳ್ಳಿ ಗ್ರಾಮದ ಸಂಘದ ಕಚೇರಿ ಮುಂದೆ ಧರಣಿ ನಡೆಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರೈತರ ಬೆನ್ನೆಲುಬಾಗಿ ಅವರ ಆರ್ಥಿಕ ಸಂಕಷ್ಟಕ್ಕೆ ನೆರವು ನೀಡುವ ಸಹಕಾರ ಸಂಘಗಳಲ್ಲಿ ಇಂತಹ ಸನ್ನಿವೇಶ ಸಂಭವಿಸಿರುವುದು ಶೋಚನಿಯ ಸಂಗತಿಯಾಗಿದೆ. ಇನ್ನು 3 ದಿನಗಳ ಒಳಗಾಗಿ ರೈತರಿಗೆ ಹಾಗೂ ಸಂಘಕ್ಕೆ ಸೇರಬೇಕಾದ ಹಣ ವಾಪಸ್ ಬಾರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ರೈತರು ಹಾಗೂ ಗ್ರಾಮಸ್ಥರು ಧರಣಿ ನಡೆಸಬೇಕಾಗುತ್ತದೆ ಎಂದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬಳಿಕ ಮಾತನಾಡಿದ ಗ್ರಾಮಸ್ಥರು, ರೈತರ ಹಾಗೂ ಸಂಘದ ಹಣವನ್ನು ಆಡಳಿತ ಮಂಡಳಿ ಕೆಲವು ನಿರ್ದೇಶಕರ ಕುಮ್ಮಕ್ಕಿನಿಂದ ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಸಂಘವನ್ನು ಹೀನಾಯ ಸ್ಥಿತಿಗೆ ದೂಡಲು ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಣ ದುರುಪಯೋಗಪಡಿಸಿಕೊಂಡ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ಈ ಕೃತ್ಯ ಎಸಗಿದ ಅಧಿಕಾರಿಗಳು ತಪ್ಪೊಪ್ಪಿಕೊಂಡ ಕೂಡಲೇ ಗ್ರಾಮಸ್ಥರ ಹಾಗೂ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಸಂಘಕ್ಕೆ ಹಣವನ್ನು ವಾಪಸ್ ನೀಡುವಂತೆ ಆಗ್ರಹಿಸಿದರು. ಸಂಘಕ್ಕೆ ಹಣ ಹಿಂದಿರುಗಿಸುವ ತನಕ ಕೃಷಿ ಪತ್ತಿನ ಸಹಕಾರ ಸಂಘದ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು.

ಎಂಡಿಸಿಸಿ ಬ್ಯಾಂಕ್ ವ್ಯವ್ಯಸ್ಥಾಪಕ ರಮೇಶ್, ಮೇಲ್ವಿಚಾರಕ ಅನಿಲ್‌ಕುಮಾರ್, ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.